ಮೈಸೂರು : ಪಡಿತರ ನೀಡಲು ನ್ಯಾಯಬೆಲೆ ಅಂಗಡಿಗಳು ಬಡವರಿಂದ ಹಣ ಪಡೆದರೆ ಅಂತಹ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು ಮಾಡಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಎಚ್ಚರಿಕೆ ನೀಡಿದ್ದಾರೆ.
ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಏರ್ಪಡಿಸಿದ್ದ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಶೇಖರ್, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ನೀಡಲು 20 ರಿಂದ 50 ರೂ. ಪಡೆಯಲಾಗುತ್ತಿದೆ. ಇದರ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ದುಡ್ಡು ಪಡೆದು ಪಡಿತರ ನೀಡುತ್ತಿರುವ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು ಮಾಡಲಾಗುವುದು ಎಂದರು.
ನಂಜನಗೂಡು ತಾಲೂಕು ಕೊರೊನಾ ಹಾಟ್ಸ್ಪಾಟ್ ಆಗಿರುವುದರಿಂದ ತರಕಾರಿ ಹಾಗೂ ದಿನಸಿ ಪದಾರ್ಥಗಳು ತಲುಪುತ್ತಿಲ್ಲ ಎಂದು ದೂರುಗಳು ಬಂದಿವೆ. ಇದರ ಬಗ್ಗೆ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮುಂದಿನ ಕ್ರಮವಹಿಸುತ್ತೇನೆ ಎಂದರು.
ಶಾಸಕ ಎಲ್.ನಾಗೇಂದ್ರ ಅವರು ಮಾತನಾಡಿ, ಎಂಟು ಪದಾರ್ಥಗಳಿರುವ ಆಹಾರ ಕಿಟ್ 8 ಸಾವಿರ ಮಂದಿಗೆ ನೀಡಲಾಗುವುದು. ಸಾರ್ವಜನಿಕರು ಆತಂಕ ಪಡಬೇಡಿ ಎಂದು ಹೇಳಿದರು.