ಮೈಸೂರು: ಆರ್‌ಎಸ್‌ಎಸ್, ಸಂಘ ಪರಿವಾರದವರಿಗೆ ಸಮಾಜ ಬದಲಾವಣೆಯಾಗದೇ ಯಥಾಸ್ಥಿತಿಯಲ್ಲಿ ಉಳಿಯವ ಅಪೇಕ್ಷೆ ಇದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದ ಕಲಾಮಂದಿರದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಆಯೋಜಿಸಿದ್ದ ಸಂತ ಶ್ರೇಷ್ಠ ಶ್ರೀಭಕ್ತ ಕನಕದಾಸರ 535ನೇ ಜಯಂತ್ಯೋತ್ಸವ, ಸಮಿತಿ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ ಸವಾರಂಭವನ್ನು ಉದ್ಘಾಟಿಸಿ ವಾತನಾಡಿದ ಅವರು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಆರ್‌ಎಸ್‌ಎಸ್‌ನವರು ದೇಶಭಕ್ತರೆಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಪಟ್ಟಭದ್ರ ಹಿತಾಸಕ್ತಿಗಳಿಗೆ ದೇಶ ಸುಧಾರಣೆಯಾಗುವುದು ಇಷ್ಟವಿಲ್ಲ. ದೌರ್ಜನ್ಯ, ಅಸಮಾನತೆ ಇರಬೇಕೆಂದು ಅವರು ಭಯಸುತ್ತಾರೆ. ಅದಕ್ಕಾಗಿಯೇ ಅವರು ದೇಶದಲ್ಲಿ ಕೋಮು ಸಾಮರಸ್ಯ ಕದಡುತ್ತಿದ್ದಾರೆ. ಮುಸ್ಲಿಂ ಸಮುದಾಯದವರನ್ನು ಬಿದಿರು ಬೊಂಬೆಯಂತೆ ಮಾಡಿಕೊಂಡು ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ಜಾತಿ ವ್ಯವಸ್ಥೆಯನ್ನು ನಿರ್ಮೂಲನೆಗೊಳಿಸಲು ಸುಧಾರಣಾವಾದಿಗಳು ಎಷ್ಟೇ ಪ್ರಯತ್ನಪಟ್ಟರೂ ಪಟ್ಟಭದ್ರರ ಹಿತಾಶಕ್ತಿಯಿಂದ ಮುಂದುವರಿದಿದೆ. ಶತಮಾನಗಳಿಂದ ಜಾತಿ ವ್ಯವಸ್ಥೆ ವಿರುದ್ಧ ಮಾತನಾಡುತ್ತಿದ್ದೇವೆಯೇ ಹೊರತು ನಿರ್ಮೂಲನೆ ಮಾಡಲು ಆಗಿಲ್ಲ. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧಿಯಂತಹ ನಾಯಕರು ಇಲ್ಲಿನ ಅಸಮಾತೆಗಳ ವಿರುದ್ಧ ಸೆಟೆದು ನಿಂತರು. ಸಾಮಾಜಿಕ ಅಸಮಾನತೆ ವ್ಯವಸ್ಥೆಯಲ್ಲಿ ನೋವುಂಡವರಿಂದ ಮಾತ್ರ ಏನಾದರು ಬದಲಾವಣೆ ತರಲು ಸಾಧ್ಯ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ನಾನು ಈ ರಾಜ್ಯದ ಮುಖ್ಯಂತ್ರಿಯಾಗಲು ಸಾಧ್ಯವಾಯಿತು. ಪಟ್ಟಭದ್ರ ಹಿತಾಶಕ್ತಿಗಳಿಂದ ಸಂವಿಧಾನ ರಕ್ಷಣೆ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ, ಕುರುಬ ಸಮುದಾಯದ 250 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಮುದಾಯದ 25 ಸಾಧಕರಿಗೆ ಸನ್ಮಾನ ಮಾಡಲಾಯಿತು. ಕಾಗಿನೆಲೆ ಮಹಾಸಂಸ್ಥಾನ ಮಠದ ನಿರಂಜನಾನಂದಪುರಿ ಸ್ವಾಮೀಜಿ, ಕೆ.ಆರ್.ನಗರ ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಇದನ್ನೂ ಓದಿ: ಗುಜರಾತ್ ವಿಧಾನಸಭಾ ಚುನಾವಣೆ: ಬೆಳಗ್ಗೆ 8 ರಿಂದ 9 ಗಂಟೆವರೆಗೆ ಶೇ 4.92 ಮತದಾನ