ಮೈಸೂರು: ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ನೆಲೆಬೀಡಾದ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ. ಈ ಕೂಡಲೇ ಸರ್ಕಾರ ತನ್ನ ಪ್ರಸ್ತಾವನೆಯನ್ನು ಕೈ ಬಿಡಬೇಕು ಎಂದು ಚಾಮುಂಡಿ ಬೆಟ್ಟ ಉಳಿಸಿ ಸಮಿತಿ ಒತ್ತಾಯಿಸಿದೆ. ಈ ಬಗ್ಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಮಿತಿ ನಿರ್ಧರಿಸಿದೆ.
ಚಾಮುಂಡಿ ಬೆಟ್ಟ ಪ್ರಕೃತಿ ದತ್ತವಾಗಿ ಸ್ವಾಭಾವಿಕವಾಗಿ ನಿರ್ಮಾಣವಾಗಿದೆ. ವೈವಿಧ್ಯಮಯ ಪ್ರಾಣಿ ಸಂಕುಲಗಳು, ಅಪರೂಪದ ಗಿಡ ಮರಗಳಿವೆ. ಇಂತಹ ಬೆಟ್ಟದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಲ್ಲಿ ರೋಪ್ ವೇ ನಿರ್ಮಿಸುವ ಬಗ್ಗೆ ಮುಖ್ಯಮಂತ್ರಿಗಳು ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆದರೆ ಈ ಪ್ರಸ್ತಾವನೆಗೆ ಮೈಸೂರು ಪರಿಸರ ಬಳಗ ಹಾಗೂ ಚಾಮುಂಡಿ ಬೆಟ್ಟ ಉಳಿಸಿ ಸಮಿತಿ ವಿರೋಧ ವ್ಯಕ್ತಪಡಿಸಿದೆ.
ಈ ಬಗ್ಗೆ 'ಈಟಿವಿ ಭಾರತ್' ಜೊತೆ ಮಾತನಾಡಿದ ಪಾರಂಪರಿಕ ತಜ್ಞ ರಂಗರಾಜು ಹಾಗೂ ಪ್ರೊ. ಕಾಳಚನ್ನೆಗೌಡ, ಬೆಟ್ಟಕ್ಕೆ ಏಕೆ ರೋಪ್ ವೇ ಬೇಡ ಎಂಬುದನ್ನು ವಿವರಿಸಿದರು. ಪ್ರೊ.ರಂಗರಾಜು ಮಾತನಾಡಿ, ಚಾಮುಂಡಿ ಬೆಟ್ಟ ಕಲ್ಲಿನ ಬೆಟ್ಟವಲ್ಲ. ಇವುಗಳು ಗುಡ್ಡಗಳ ಸಮೂಹ. ಈ ಗುಡ್ಡದ ಕೆಳಗಡೆ ಇರುವ ಮಣ್ಣು ಅಷ್ಟೊಂದು ಗಟ್ಟಿಯಿಲ್ಲ. ಆದ್ದರಿಂದಲೇ ಪ್ರತಿ ಬಾರಿ ಮಳೆ ಬಂದಾಗ ಗುಡ್ಡ ಕುಸಿತ ಉಂಟಾಗುತ್ತದೆ. ಈಗಾಗಲೇ ಬೆಟ್ಟದ ರಸ್ತೆಗಳು ಕುಸಿಯುತ್ತಿದೆ. ರೋಪ್ ವೇ ಮಾಡಿದರೆ ಇನ್ನಷ್ಟು ಕುಸಿಯುವ ಭೀತಿ ಇದೆ. ಬೆಟ್ಟಕ್ಕೆ ಹೋಗಲು ಸರಿಯಾದ ರಸ್ತೆಗಳಿವೆ. ಆದ್ದರಿಂದ ರೋಪ್ ವೇ ಅಳವಡಿಸುವ ಅಗತ್ಯ ಇಲ್ಲ. ನಾವು ಪ್ರವಾಸೋದ್ಯಮ ಅಭಿವೃದ್ಧಿಯ ವಿರೋಧಿಗಳಲ್ಲ. ಪರಿಸರ ಹಾಳು ಮಾಡಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡುವುದು ಸರಿಯಲ್ಲ ಎಂದರು.
ಪ್ರೊ.ಕಾಳಚನ್ನೇಗೌಡ ಮಾತನಾಡಿ, ರೋಪ್ ವೇ ಅಳವಡಿಸುವ ಬಗ್ಗೆ ಮುಖ್ಯಮಂತ್ರಿಗಳು ಮಾಡಿರುವ ಪ್ರಸ್ತಾವ ಸರಿಯಿಲ್ಲ. ರೋಪ್ ವೇ ಮಾಡಿದರೆ ಧಾರ್ಮಿಕ ಭಾವನೆಗಳಿಗೆ ಅಡ್ಡಿಯಾಗುತ್ತದೆ. ಧಾರ್ಮಿಕ ಕ್ಷೇತ್ರ ವಾಣಿಜ್ಯ ಕೇಂದ್ರವಾಗಿ ಪರಿವರ್ತನೆ ಆಗುತ್ತದೆ. ಆದ್ದರಿಂದ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೇಡ. ಈ ಕುರಿತು ಸಿಎಂ ಭೇಟಿಗೆ ಪತ್ರ ಬರೆಯಲಾಗಿದೆ. ಆನ್ಲೈನ್ ಮತ್ತು ಭೌತಿಕವಾಗಿ 1 ಲಕ್ಷದ 20 ಸಾವಿರ ಜನ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ ಮಾಡಿದ್ದಾರೆ. ಇದರ ಜೊತೆಗೆ ರಾಜವಂಶಸ್ಥರು, ಸಾಹಿತಿ ಎಸ್.ಎಲ್.ಭೈರಪ್ಪ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಬೆಟ್ಟಕ್ಕೆ ರೋಪ್ ವೇ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಉದ್ಘಾಟನೆ ಕಾಣದ ಧಾರವಾಡ ಪೂರ್ವ ಆರ್ಟಿಒ ಕಚೇರಿ: ಬಾಡಿಗೆ ಕಟ್ಟಡದಲ್ಲೇ ಇನ್ನೂ ಕಾರ್ಯ