ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಸಿದ್ಧಾರ್ಥ ಹೋಟೆಲ್ ನಲ್ಲಿ ಗ್ರಾಹಕರ ಸೇವೆಗೆಂದು ವಿಶೇಷವಾದ ರೋಬೋ ತರಿಸಲಾಗಿದೆ. ಈ ರೋಬೋ ಸುಂದರಿ ಗ್ರಾಹಕರಿಗೆ ಫುಡ್ನನ್ನು ಸರ್ವ್ ಮಾಡಲು ಸಜ್ಜಾಗಿದೆ.
ಸಾಂಸ್ಕೃತಿಕ ನಗರಿ ಮೈಸೂರು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಸ್ಥಳ. ಮೈಸೂರು ನೋಡಲು ಬೇರೆ ಬೇರೆ ಊರಿಂದ, ಹೊರ ರಾಜ್ಯಗಳಿಂದ ಜನರು ಬರುತ್ತಾರೆ. ಹೋಟೆಲ್ ಉದ್ಯಮವು ಸಹ ಪ್ರವಾಸೋದ್ಯಮವನ್ನು ನೆಚ್ಚಿಕೊಂಡಿರುವುದರಿಂದ ಇಲ್ಲಿ ಪೈಪೋಟಿ ಹೆಚ್ಚಾಗಿ ಇರುತ್ತದೆ. ಹಾಗಾಗಿ ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ನಗರದ ಸಿದ್ಧಾರ್ಥ ಹೋಟೆಲ್ಗೆ ದೆಹಲಿಯಿಂದ ರೋಬೋಟ್ನನ್ನು ತರಿಸಲಾಗಿದೆ.
ಈ ರೋಬೋ ಸುಂದರಿ ಇಂದಿನಿಂದ ತನ್ನ ಫುಡ್ ಸರ್ವಿಸ್ ಪ್ರಾರಂಭಿಸಿದೆ. ಹೋಟೆಲ್ ಮಾಲೀಕರಾದ ಪಿ.ವಿ.ಗಿರಿ ಅವರು ದೆಹಲಿಯಿಂದ 2.50 ಲಕ್ಷ ರೂ.ವೆಚ್ಚದಲ್ಲಿ ರೋಬೋ ಯಂತ್ರ ತರಿಸಿದ್ದಾರೆ. ಕರ್ನಾಟಕದಲ್ಲಿ ಕೇವಲ ಶಿವಮೊಗ್ಗದ ಹೋಟೆಲ್ವೊಂದರಲ್ಲಿ ಮಾತ್ರ ರೋಬೋ ಸೇವೆ ಇತ್ತು. ಆದ್ರೆ ಇಂದಿನಿಂದ ಮೈಸೂರಿನಲ್ಲಿಯೂ ರೋಬೋ ಸೇವೆ ಪ್ರಾರಂಭವಾಗಿದೆ.
ಮೈಸೂರಿಗೆ ಬಂದ ಸರ್ವಿಸ್ ಮಾಡುವ ರೋಬೋ: ಮೈಸೂರಿನಲ್ಲೇ ಮೊದಲ ಬಾರಿಗೆ ಈ ವಿನೂತನ ಪ್ರಯತ್ನವನ್ನು ನಗರದ ಹೋಟೆಲ್ ಸಿದ್ಧಾರ್ಥದಲ್ಲಿ ಮಾಡಲಾಗುತ್ತಿದೆ. ಹೋಟೆಲ್ಗೆ ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಹೊಸ ಪ್ರಯತ್ನ ಮಾಡಲಾಗಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
ರೋಬೋ ವಿಶೇಷತೆಗಳು: ಇದು ಬ್ಯಾಟರಿ ಚಾಲಿತ ರೋಬೋಟ್ ಆಗಿದ್ದು, 4 ಗಂಟೆಗಳ ಕಾಲ ಒಮ್ಮೆ ಚಾರ್ಜ್ ಮಾಡಿದರೆ 8 ಗಂಟೆ ತನಕ ಕಾರ್ಯನಿರ್ವಹಿಸುತ್ತದೆ. ಜೊತೆಗೆ ರೋಬೋ 10 ಕೆ.ಜಿ ಯಷ್ಟು ಭಾರವನ್ನು ಹೊತ್ತು, ನಿಗದಿಸಿದ ಸ್ಥಳಕ್ಕೆ ತಲುಪಿಸಲಿದೆ.
ಮಾನವನ ಆದೇಶದ ಮೇರೆಗೆ ಕೆಲಸ ಮಾಡುತ್ತದೆ. ಜೊತೆಗೆ ರೋಬೋ ಸಂಚಾರಕ್ಕಾಗಿ ಕಿಚನ್ನಿಂದ ಪ್ರತಿ ಟೇಬಲ್ಗಳ ಬಳಿಗೆ ಆಯಸ್ಕಾಂತದ ಪಟ್ಟಿಯನ್ನು (ಮ್ಯಾಗ್ನೆಟಿಕ್ ಸ್ಟ್ರೈಪ್) ಅಳವಡಿಸಲಾಗಿದ್ದು, ಕಮಾಂಡ್ ನೀಡಿದ ಸ್ಥಳಕ್ಕೆ ತೆರಳಿ ಸೇವೆಯನ್ನು ಒದಗಿಸುತ್ತದೆ ಎಂದು ಈಟಿವಿ ಜೊತೆ ಮಾತನಾಡಿದ ಐಟಿ ವಿಭಾಗದ ಉಮೇಶ್ ತಿಳಿಸಿದರು.
ಇದನ್ನೂ ಓದಿ: ಚಿಕ್ಕಮಗಳೂರು : ಟಗರಿನ ಗಾಡಿಯಲ್ಲಿ ಅಂತರಘಟ್ಟಮ್ಮ ಜಾತ್ರೆಗೆ ಆಗಮಿಸಿದ ರೈತ
ರೋಬೋ ಸುಂದರಿ ಆಹಾರವನ್ನು ಗ್ರಾಹಕರ ಟೇಬಲ್ ತಲುಪಿಸುವುದರ ಜೊತೆಗೆ ಹೋಟೆಲ್ ಮೇನುವನ್ನು ಗ್ರಾಹಕರಿಗೆ ತಿಳಿಸಿ ಅವರಿಂದ ಆರ್ಡರ್ ತೆಗೆದುಕೊಂಡು ಬಂದು ಕಿಚನ್ನಲ್ಲಿ ತಿಳಿಸುತ್ತದೆ. ಜೊತೆಗೆ ಈ ರೋಬೋ ಸ್ವಚ್ಚಗೊಳಿಸುವಾಗಲೂ ನೆರವಾಗಲಿದ್ದು, ಪ್ಲೇಟ್, ಲೋಟಾವನ್ನು ಟ್ರೇ ಮೇಲೆ ಇಟ್ಟು ಆದೇಶ ನೀಡಿದರೆ ವಾಷಿಂಗ್ ಏರಿಯಾಗೆ ತಲುಪಿಸುತ್ತದೆ.
ವಾಯ್ಸ್ ಕಮಾಂಡ್ ಮೂಲಕ ಕಾರ್ಯನಿರ್ವಹಿಸುವ ರೋಬೋ: ವಾಯ್ಸ್ ಕಮಾಂಡ್ ನೀಡಿದರೆ ಕಾರ್ಯ ನಿರ್ವಹಿಸುವ ಈ ರೋಬೋ ಟೇಬಲ್ ಬಳಿ ಬಂದು ಫುಡ್ ತಲುಪಿಸುತ್ತದೆ. ನಂತರ ಫುಡ್ ತೆಗೆದುಕೊಂಡು ಗೋ ಬ್ಯಾಕ್ ಎಂದು ಆದೇಶ ನೀಡಿದರೆ ತನ್ನ ನಿಗದಿತ ಸ್ಥಳಕ್ಕೆ ವಾಪಸ್ ಆಗುತ್ತದೆ.
ಈ ರೋಬೋ ಹೋಟೆಲ್ನ ಮೇನು ಸೇರಿದಂತೆ ಮೈಸೂರು ನಗರದ ಸುತ್ತ ಮುತ್ತಲಿನ ಪ್ರಾವಾಸಿ ತಾಣಗಳು, ಇತಿಹಾಸ, ಬಸ್, ರೈಲು ನಿಲ್ದಾಣದ ಅಂತರ ಹೀಗೆ ವಿವರಗಳನ್ನು ರೋಬೋ ನೀಡಿಲಿದೆ. ಇನ್ನೂ ಹಲವಾರು ಫೀಚರ್ಗಳು ಇದ್ದು ಹಂತ ಹಂತವಾಗಿ ಅಪ್ಡೇಟ್ ಮಾಡಲಾಗುತ್ತದೆ ಎಂದು ಐಟಿ ವಿಭಾಗದ ಉಮೇಶ್ ಈ ಟಿವಿ ಭಾರತಗೆ ತಿಳಿಸಿದ್ದಾರೆ.