ಮೈಸೂರು : ಕಪಿಲಾ ನದಿಯಲ್ಲಿ ಉಂಟಾದ ಪ್ರವಾಹದಿಂದ ಮೈಸೂರು ಮತ್ತು ಊಟಿ ನಡುವಿನ ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ನಂಜನಗೂಡು ತಹಶೀಲ್ದಾರ್ ತಿಳಿಸಿದ್ದಾರೆ.
ಕಬಿನಿ ಜಲಾಶಯದಿಂದ ಕಪಿಲಾ ನದಿಗೆ 78,000 ಕ್ಯೂಸೆಕ್ ನೀರನ್ನು ಬಿಟ್ಟಿರುವುದರಿಂದ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯ ನಂಜನಗೂಡಿನ ಬಳಿಯ ಸೇತುವೆ ಜಲಾವೃತವಾಗಿದೆ. ಇದರಿಂದ ಬಸವನಪುರ ಗ್ರಾಮದ ಮಾರ್ಗವಾಗಿ ಮೈಸೂರಿಗೆ ತೆರಳಲು ಬದಲಿ ಸಂಚಾರ ವ್ಯವಸ್ಥೆ ಮಾಡಲು ನಂಜನಗೂಡಿನ ತಹಶೀಲ್ದಾರ್ ಮಹೇಶ್‌ಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ. ಪ್ರವಾಹದಿಂದ ವಾಹನ ಸವಾರರಿಗೆ ಬದಲಿ ಮಾರ್ಗವಾಗಿ ಹೋಗಲು ಪೊಲೀಸರು ಸೂಚಿಸುತ್ತಿದ್ದಾರೆ.
ಕಪಿಲಾ ಪ್ರವಾಹಕ್ಕೆ ಈಗಾಗಲೇ ಜಲಾವೃತವಾಗಿರುವ ನಂಜನಗೂಡು-ಊಟಿ ರಾಷ್ಟ್ರೀಯ ಹೆದ್ದಾರಿ ಜೊತೆಗೆ ಮಲ್ಲನಮೂಲೆ ಮಠವೂ ಸಹ ಜಲಾವೃತವಾಗುವ ಅಪಾಯದಲ್ಲಿದೆ. ಕಪಿಲಾನದಿಯ ದಡದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯ, ಗಣಪತಿ ದೇವಾಲಯ, ಶ್ರೀಚಾಮುಂಡೇಶ್ವರಿ ದೇವಾಲಯದ ಸ್ನಾನಘಟ್ಟ, ಶ್ರೀಕಂಠೇಶ್ವರ ದೇವಾಲಯದ ಮುಡಿ ತೆಗೆಯುವ ಸ್ಥಳ, ವಸತಿ ಗೃಹಗಳು ಈಗಾಗಲೇ ಜಲಾವೃತವಾಗಿದ್ದು, ಇನ್ನು ಒಕ್ಕಲಗೇರಿ, ಕುರುಬರಗೇರಿ, ತೋಪಿನ ಬೀದಿ ಸಹ ಕಪಿಲೆಯ ಪ್ರವಾಹಕ್ಕೆ ತುತ್ತಾಗಿದೆ.
ಹೆಚ್‌ಡಿಕೋಟೆ ಮತ್ತು ಪಿರಿಯಾಪಟ್ಟಣದಲ್ಲಿ ಪ್ರವಾಹ : ಕಬಿನಿ ಜಲಾಶಯದಿಂದ ಹೆಚ್ಚಿನ ನೀರನ್ನು ನದಿಗೆ ಬಿಟ್ಟಿರುವುದರಿಂದ ಹೆಚ್‌ಡಿಕೋಟೆ ಭಾಗದ ಹಲವು ಗ್ರಾಮಗಳು ಜಲಾವೃತವಾಗಿವೆ. ಮಾದಪುರ ಮತ್ತು ಬಿದರಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಹಲವು ಗ್ರಾಮಗಳು ಪ್ರವಾಹದ ಭೀತಿ ಎದಿರುಸುತ್ತಿವೆ. ಈ ಹಿನ್ನೆಲೆ ಹೆಚ್‌ಡಿಕೋಟೆ ತಾಲೂಕಿನ ಗೋಳುರು, ನೆಕ್ಕಲುಹುಂಡೆ, ಕುಪ್ಪೆ ಗ್ರಾಮದಲ್ಲಿರುವ 58 ಕುಟುಂಬಗಳನ್ನು ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಕಾವೇರಿ ನದಿಪಾತ್ರದ ಹಲವು ಗ್ರಾಮಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿವೆ. ಕಾವೇರಿ ನದಿಪಾತ್ರದ ಬೆಳೆಗಳಿಗೆ ನೀರು ನುಗ್ಗಿ ತೋಟಗಳು ಸಂಪೂರ್ಣ ಜಲಾವೃತವಾಗಿ, ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಬಿನಿ ಜಲಾಶಯದಿಂದ ಕಪಿಲಾ ನದಿಗೆ ಹೆಚ್ಚಿನ ನೀರನ್ನು ಹರಿಬಿಡಲಾದ ಪರಿಣಾಮ ಹೆಚ್‌ಡಿಕೋಟೆ, ನಂಜನಗೂಡು ಹಾಗೂ ಸುತ್ತೂರು ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ರೆ, ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಯ ಪ್ರವಾಹದಿಂದ ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕಿನ ನದಿ ಪಕ್ಕದ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಇದೆ. ಜನರು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಜಿಲ್ಲಾಡಳಿತ ಮುನ್ನೆಚ್ಚರಿಕಾ ಸಂದೇಶ ನೀಡಿದೆ.