ಮೈಸೂರು: ಜೂ.5 ರಂದು ಕೇಂದ್ರದ 3 ಕೃಷಿ ವಿರೋಧಿ ಮಸೂದೆಗಳ ಪ್ರತಿಯನ್ನು ಸುಟ್ಟು 'ಸಂಪೂರ್ಣ ಕ್ರಾಂತಿ ದಿನ' ಆಚರಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಜೂ.5 ರಂದು ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿಯ ದಿನ. ಆ ದಿನದಂದು ರಾಜ್ಯದಲ್ಲಿ ಸಂಯುಕ್ತ ಕಿಸಾನ್ ಮೋರ್ಚ ದೇಶದ ಹಾಗೂ ರಾಜ್ಯದ ಬಿಜೆಪಿ, ಎಂಪಿ, ಹಾಗೂ ಎಂಎಲ್ಎಗಳ ಕಚೇರಿಗಳ ಮುಂದೆ ಕೇಂದ್ರದ 3 ಮಸೂದೆಗಳ ಪ್ರತಿಯನ್ನು ಸುಟ್ಟು ಕ್ರಾಂತಿ ದಿನ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಹಿಂದೆ ಸಂವಿಧಾನ ವಿರೋಧಿ, ಭ್ರಷ್ಟಾಚಾರಿ ಸರ್ಕಾರದ ವಿರುದ್ದ ಜಯಪ್ರಕಾಶ್ ನಾರಾಯಣ್ ಸಂಪೂರ್ಣ ಕ್ರಾಂತಿಯ ದಿನವನ್ನು ಜೂ.5 ರಂದು ಮಾಡಿದ್ದರು. ಅದೇ ರೀತಿ ಇಂದಿನ ಕೇಂದ್ರ ಸರ್ಕಾರ ಸಂವಿಧಾನ ಹಾಗೂ ರೈತ ವಿರೋಧಿಯಾಗಿದೆ. ಪ್ರಶ್ನೆ ಮಾಡುವವರನ್ನು ಜೈಲಿಗೆ ಕಳುಹಿಸುತ್ತಾರೆ. ಖಾಸಗಿಯವರಿಗೆ ರೈತರ ಭೂಮಿಯನ್ನು ಮಾರಾಟ ಮಾಡುತ್ತಿದ್ದು, ಇದನ್ನು ವಿರೋಧಿಸಿ ಜೂ.5 ರಂದು ಪ್ರತಿಭಟನೆ ನಡೆಸಲಾಗುವುದು ಎಂದರು.