ಮೈಸೂರು : ಮೈಮುಲ್ ಚುನಾವಣೆಯಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಬಾಮೈದ ಸೋತಿದ್ದಾರೆ. ಈ ಮೂಲಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಶಾಸಕ ಜಿ.ಟಿ. ದೇವೇಗೌಡ ಸೆಡ್ಡು ಹೊಡೆದಿದ್ದಾರೆ.
ಒಟ್ಟು 15 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಜಿಟಿಡಿ ಬಣ ಗೆದ್ದಿದೆ. 3 ಸ್ಥಾನಗಳಿಗೆ ಹೆಚ್.ಡಿ. ಕುಮಾರಸ್ವಾಮಿ ಬಣ ಸಮಾಧಾನ ಪಟ್ಟುಕೊಂಡಿದೆ. ಜಿಟಿಡಿ ಬಣದಲ್ಲಿದ್ದ ಆಪ್ತ, ಮೈಮುಲ್ ಅಧ್ಯಕ್ಷನಾಗಿದ್ದ ಮಾವನಹಳ್ಳಿ ಸಿದ್ದೇಗೌಡರ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮೂರು ಸ್ಥಾನಗಳನ್ನು ಗಳಿಸಿದ್ದು, ಗೆದ್ದ ಮೂವರಲ್ಲಿ ಕಾಂಗ್ರೆಸ್ಗೆ 2 ಸ್ಥಾನ ಹಾಗೂ ಜೆಡಿಎಸ್ಗೆ ಒಂದು ಸ್ಥಾನ ದಕ್ಕಿದೆ. ಶಾಸಕ ಜಿ.ಟಿ.ದೇವೇಗೌಡ ಬಣ ಹುಣಸೂರು ಉಪವಿಭಾಗದಲ್ಲಿ ಎಂಟಕ್ಕೆ ಎಂಟೂ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮೈಸೂರು ವಿಭಾಗದಲ್ಲಿ ಜಿಟಿಡಿ ತಂಡಕ್ಕೆ 4 ಸ್ಥಾನ ದಕ್ಕಿದೆ.
ಹೆಚ್.ಡಿ.ರೇವಣ್ಣ ಬಾಮೈದನಿಗೆ ಸೋಲು:
ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಬಾಮೈದ ಕೆ.ಎಸ್.ಮಧುಚಂದ್ರ ಮೈಮುಲ್ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಪೂರ್ವಭಾವಿ ಸಿದ್ದತೆ ಇಲ್ಲದೆ ಚುನಾವಣೆಗೆ ಹೋಗಿದ್ದೆವು. ಈ ಚುನಾವಣೆ ನಡೆಯುತ್ತದೋ ಇಲ್ಲವೊ ಎಂಬ ಅನುಮಾನ ಇತ್ತು. ನಾವು ಸರಿಯಾಗಿ ಸಂಘಟನೆ ಮಾಡಿದ್ದೆವು. ಆದರೆ, ಜಿ.ಟಿ.ದೇವೆಗೌಡರು ಮೈಸೂರಿನ ಸಹಕಾರಿ ಧುರೀಣ ಎಂಬುವುದು ಸಾಬೀತಾಗಿದೆ ಎಂದರು.
ಇದು ಜೆಡಿಎಸ್ ಪಕ್ಷದ ಸೋಲಲ್ಲ, ನನ್ನ ವೈಯುಕ್ತಿಕ ಸೋಲು. ರೇವಣ್ಣರವರು ನನ್ನ ಭಾವ ಇರಬಹುದು. ಪಕ್ಷದ ಮುಖಂಡರಾಗಿ ನನ್ನ ಪರವಾಗಿ ಪ್ರಚಾರ ಮಾಡಿದ್ದಾರೆ. ಹುಣಸೂರು ವಿಭಾಗದಲ್ಲಿ ನಮ್ಮ ಬಣದವರು ಯಾರು ಗೆದ್ದಿಲ್ಲ ಎಂದು ತಿಳಿಸಿದರು.