ಮೈಸೂರು: ನಿನ್ನೆ ಆರ್.ಎಸ್.ನಾಯ್ಡು ನಗರದಲ್ಲಿನ ನರ್ಸಿಂಗ್ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಯತ್ನ, ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತನಿಖೆ ನಡೆಸಿದಾಗ ಆರೋಪಿ ಹಾಗೂ ಯುವತಿ ಒಬ್ಬರಿಗೊಬ್ಬರು ಪರಿಚಯಸ್ಥರು ಎಂದು ತಿಳಿದು ಬಂದಿದೆ.
ನಗರ ಪೊಲೀಸ್ ಆಯುಕ್ತರು ಹೇಳಿದ್ದೇನು?
ಪ್ರಕರಣ ಸಂಬಂಧ ಇಂದು ನ್ಯಾಯಾಧೀಶರ ಮುಂದೆ ಸಂತ್ರಸ್ತ ಯುವತಿ ಹೇಳಿಕೆ ನೀಡಲಿದ್ದಾಳೆ. ಮೈಸೂರಿನ ನರಸಿಂಹ ರಾಜ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಹಲ್ಲೆ ಪ್ರಕರಣ ದಾಖಲಾಗಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದು ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧಿಸಿದ್ದರು ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿ ಆಹಾರವನ್ನು ಕೇಳಿದ್ದು, ಅದಕ್ಕಾಗಿ ಮನೆಯ ಬಾಗಿಲು ತೆರೆದ ಸಂದರ್ಭದಲ್ಲಿ ಅತ್ಯಾಚಾರ ಮತ್ತು ಹಲ್ಲೆ ಮಾಡಿರುವುದಾಗಿ ಸಂತ್ರಸ್ತೆ ಹೇಳಿಕೆ ನೀಡಿದ್ದಳು. ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ, ತನಿಖೆ ನಡೆಸಿದಾಗ ಇಬ್ಬರು ಒಬ್ಬರಿಗೊಬ್ಬರು ಪರಿಚಯವಿರುವುದಾಗಿ ತಿಳಿದು ಬಂದಿದೆ. ಆದರೆ ಸಂತ್ರಸ್ತೆ ಆರೋಪಿತ ವ್ಯಕ್ತಿಯನ್ನು ಅಪರಿಚಿತ ಎಂದು ಯಾವ ಕಾರಣಕ್ಕೆ ಹೇಳಿದ್ದಾಳೆ ಎಂಬುದು ತಿಳಿದು ಬಂದಿಲ್ಲ ಎಂದು ಆಯುಕ್ತರು ಹೇಳಿದ್ದಾರೆ.
ಸಂತ್ರಸ್ತೆಗೆ ಈಗಾಗಲೇ ವೈದ್ಯಕೀಯ ಚಿಕಿತ್ಸೆ ನೀಡಿ ಕೌನ್ಸೆಲಿಂಗ್ ಮಾಡಲು ಸೂಚಿಸಲಾಗಿದೆ. ಇಂದು ನ್ಯಾಯಾಧೀಶರ ಮುಂದೆ ಸಂತ್ರಸ್ತೆ ಹೇಳಿಕೆ ನೀಡಲಿದ್ದು, ಆಕೆಯ ಹೇಳಿಕೆಯ ಆಧಾರದ ಮೇಲೆ ತನಿಖೆ ಮುಂದುವರೆಸಲಾಗುವುದು. ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಯುವತಿ ಹೇಳಿಕೆಯಂತೆ ಎಫ್ಐಆರ್ ದಾಖಲಿಸಲಾಗಿದೆ. ಅತ್ಯಾಚಾರ ಪ್ರಯತ್ನ ಅಥವಾ ಅತ್ಯಾಚಾರವಾಗಿದೆಯೇ ಎಂಬುದು ವೈದ್ಯಕೀಯ ಪರೀಕ್ಷೆ ನಂತರ ತಿಳಿದು ಬರಲಿದೆ ಎಂದರು.
ಪ್ರಕರಣ ಹಿನ್ನೆಲೆ:
ಎಸ್.ಆರ್.ನಾಯ್ಡು ನಗರದಲ್ಲಿರುವ ಹೋಲಿ ಕ್ರಾಸ್ ಸ್ಟಡಿ ಹೌಸ್ನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಹಲ್ಲೆ ಮಾಡಿ ಯುವಕ ಪರಾರಿಯಾಗಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು. ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿಸಿಪಿ ಪ್ರದೀಪ್ ಗುಂಟಿ, ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸಿದ್ದರು. ಇದಾದ ಬಳಿಕ 4 ಗಂಟೆಯಲ್ಲಿ ಆರೋಪಿ ಬಂಧಿಸಲಾಗಿತ್ತು.
ಇದನ್ನೂ ಓದಿ: ಪ್ಲೀಸ್, ಎನ್ಕೌಂಟರ್ ಮಾಡಬೇಡಿ.. ಕರ್ನಾಟಕ ಪೊಲೀಸರಿಗೆ ಮನವಿ ಮಾಡಿದ ಆರೋಪಿಗಳ ಪೋಷಕರು..