ಮೈಸೂರು : ದೇಶಾದ್ಯಂತ ಇಂದು ಶ್ರೀ ರಾಮನವಮಿಯ ಸಂಭ್ರಮ ಮನೆ ಮಾಡಿದ್ದು, ಸಾಂಸ್ಕೃತಿಕ ನಗರಿಯಲ್ಲೂ ಸಹ ಸಂಭ್ರಮದಿಂದ ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತಿದ್ದು, ರಾಮ ಮಂದಿರಗಳಿಗೆ ವಿಶೇಷ ಅಲಂಕಾರ, ಪೂಜೆ ಹಾಗೂ ಭಕ್ತರಿಗೆ ಪಾನಕ ಹಾಗೂ ಕೊಸಂಬರಿ ವಿತರಿಸಲಾಗುತ್ತಿದೆ.
ಸಾಂಸ್ಕೃತಿಕ ನಗರಿಯ ವಿವಿಧ ಬಡಾವಣೆಗಳಲ್ಲಿ ಶ್ರೀ ರಾಮ ಮಂದಿರಗಳಿದ್ದು, ಬೆಳಗಿನಿಂದಲೇ ಮಂದಿರಗಳಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಪೂಜೆ ನೆರವೇರಿಸಿ ನಂತರ ಭಕ್ತಾದಿಗಳಿಗೆ ಪಾನಕ ಹಾಗೂ ಮಜ್ಜಿಗೆಯನ್ನು ವಿತರಿಸಲಾಗುತ್ತಿದೆ. ಮೈಸೂರಿನ ಶಿವರಾಂ ಪೇಟೆಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀರಾಮ ಮಂದಿರದಲ್ಲಿ ಕಳೆದ 100 ಕ್ಕೂ ಹೆಚ್ಚು ವರ್ಷಗಳಿಂದ ಪೂಜೆ ಸಲ್ಲಿಸಲಾಗುತ್ತಿದ್ದು, ಈ ಬಗ್ಗೆ ಅಲ್ಲಿನ ಪ್ರಮುಖರಾದ ಡಾ. ಶ್ರೀ ರಾಮ್ ಮಾಹಿತಿ ನೀಡಿದರು.
ನಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಂದು 133 ನೇ ಶ್ರೀ ರಾಮ ನವಮಿಯನ್ನು ಆಚರಿಸುತ್ತಿದ್ದು, ಇಲ್ಲಿಯ ವಿಶೇಷ ಏನೆಂದರೆ ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಇದೇ ಜಾಗದಲ್ಲಿ ರಾಮ ನವಮಿಯನ್ನು ಆಚರಿಸುತ್ತ ಬಂದಿದ್ದು, ಅದನ್ನು ನಾವು ಮುಂದುವರೆಸಿಕೊಂಡು ಬಂದಿದ್ದೇವೆ. ಇಂದಿನಿಂದ ಪ್ರಾರಂಭಿಸಿ ಸುಮಾರು 10 ದಿನಗಳ ಕಾಲ ರಾಮೋತ್ಸವವನ್ನು ಆಚರಿಸಲಾಗುತ್ತದೆ. ಏ. 9 ನೇ ತಾರೀಖಿನಿಂದು ಇಲ್ಲಿ ಶ್ರೀ ರಾಮನ ಪಟ್ಟಾಭಿಷೇಕ ನಡೆಸಲಾಗುತ್ತದೆ. ಅಂದು ಸುಮಾರು 1000 ಕ್ಕೂ ಹೆಚ್ಚು ಜನರಿಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆ.
ಈ ಪೂಜಾ ಕಾರ್ಯಕ್ರಮದ ಜೊತೆಗೆ ಪಕ್ಕದ ಭವನದಲ್ಲಿ 10 ದಿನಗಳ ಕಾಲ ಸಂಗೀತೋತ್ಸವ ನಡೆಸಲಾಗುತ್ತದೆ. ದೇಶ ವಿದೇಶಗಳಿಂದ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ನಂತರ ಹನುಮಂತೋತ್ಸವ, ಶಯನೋತ್ಸವ ನಡೆಯಲಿದ್ದು, ಕೊನೆಯಲ್ಲಿ ಶಂಕರ ಜಯಂತಿ ಉತ್ಸವದೊಂದಿಗೆ ಈ ವರ್ಷದ ರಾಮೋತ್ಸವವನ್ನು ಸಮಾಪ್ತಿ ಮಾಡಲಾಗುತ್ತದೆ. ಇಂದು ಬೆಳಗ್ಗಿನಿಂದಲೇ ದೇವರಿಗೆ ಅಭಿಷೇಕ, ಪೂಜೆ ನೆರವೇರಿಸಲಾಗುತ್ತಿದ್ದು, ರುದ್ರಾಭಿಷೇಕ, ಅಷ್ಟೋತ್ತರ ಕೊನೆಯದಾಗಿ ದೇವರಿಗೆ ಮಂಗಳಾರತಿ ಮಾಡಿ ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ ವಿತರಿಸಲಾಗುತ್ತಿದೆ ಎಂದು ದೇವಸ್ಥಾನದ ಪ್ರಮುಖರಾದ ಡಾ.ಶ್ರೀ ರಾಮ್ ತಿಳಿಸಿದರು.
ಭಾವೈಕ್ಯತೆ ಸಾರಿದ ರಾಮನವಮಿ, ಪಾನಕ-ಮಜ್ಜಿಗೆ ವಿತರಿಸಿದ ಹಿಂದೂ-ಮುಸ್ಲಿಂರು: ರಾಮನವಮಿ ಹಬ್ಬದ ಆಚರಣೆ ಜೋರಾಗಿರುವ ನಡುವೆ ಮೈಸೂರಿನಲ್ಲಿ ಅಪರೂಪ ಹಾಗೂ ಮಾದರಿಯಾಗುವ ಘಟನೆ ನಡೆದಿದೆ. ಹೌದು, ಮೈಸೂರು ಜಿಲ್ಲಾ ಪೆಂಡಾಲ್ ಮಾಲೀಕರ ಸಂಘದ ವತಿಯಿಂದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ರಾಮನವಮಿ ಆಚರಿಸಲಾಯಿತು. ಈ ವೇಳೆಯಲ್ಲಿ ಹಿಂದೂ ಮುಸಲ್ಮಾನ್ ಭಾವೈಕ್ಯತೆಯಿಂದ ಶ್ರೀ ರಾಮಚಂದ್ರನ ಪ್ರಭು ಭಾವಚಿತ್ರಕ್ಕೆ ಪೂಜಿ ಸಲ್ಲಿಸಿದರು.ಆನಂತರ ಭಕ್ತಾದಿಗಳಿಗೆ ಪಾನಕ ಮಜ್ಜಿಗೆ ಕೋಸಂಬರಿ ವಿತರಿಸಿದರು.
ಹಿಂದೂ ಮುಸಲ್ಮಾನ್ ಭಾವೈಕ್ಯತೆಯಿಂದ ಶ್ರೀ ರಾಮನವಮಿ ಆಚರಣೆ ಪಾನಕ ಮಜ್ಜಿಗೆ ಹಂಚುವ ಮೂಲಕ ನಾವೆಲ್ಲರೂ ಭಾರತೀಯರು ಎಂಬ ಸಂದೇಶ ಸಾರಿದರು. ಮುಸಲ್ಮಾನ್ ಬಾಂಧವರು ಭಾಗವಹಿಸಿದ್ದಕ್ಕೆ ಹಿಂದೂ ಯುವಕರು ಸಂತೋಷ ವ್ಯಕ್ತಪಡಿಸಿದರು. ವಿಶೇಷವಾಗಿ ಶ್ರೀ ರಾಮನ ವೇಷ ಧರಿಸಿ ಬಂದ ಸಿದ್ದಾರ್ಥ ಲೇಔಟ್ ನಿವಾಸಿ ಜೀವನ್ ರವರು ವಿಶೇಷ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಶಿವಕುಮಾರ್, ಅಧ್ಯಕ್ಷರಾದ ತಾಜ್ ಮಹಮ್ಮದ್, ಲಿಂಗಪ್ಪ, ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ರೆಹಮಾನ್, ವಾಸಿಂ, ಜೀವದಾರ ರಕ್ಕ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಲೋಹಿತ್, ಹಾಗೂ ಇನ್ನಿತರರು ಭಾಗವಹಿಸಿದ್ದರು.
ಇದನ್ನೂ ಓದಿ: ರಾಮನವಮಿ ಹಿನ್ನೆಲೆ ಮಾಂಸ ಮಾರಾಟ, ಪ್ರಾಣಿವಧೆ ನಿಷೇಧ: ಬಿಬಿಎಂಪಿ ಸುತ್ತೋಲೆ