ಮೈಸೂರು: ರೈಲ್ವೆ ಮಂಡಳಿಯ ನಿರ್ದೇಶನದಂತೆ ಮತ್ತು ರೈಲ್ವೆಯ ಸರಕು ಸಾಗಣೆಗೆ ಉತ್ತೇಜನ ನೀಡುವ ಸಲುವಾಗಿ ವಲಯಮಟ್ಟ ಮತ್ತು ವಿಭಾಗೀಯ ಮಟ್ಟದಲ್ಲಿ ಎಲ್ಲಾ ಸಂಬಂಧಿತ ಇಲಾಖೆಗಳ ಕಾರ್ಯಕಾರಿಗಳನ್ನು ಒಳಗೊಂಡ ವ್ಯಾಪಾರ ಅಭಿವೃದ್ಧಿ ಘಟಕಗಳನ್ನು (ಬಿ.ಡಿ.ಯು) ಸ್ಥಾಪಿಸಲಾಗಿದೆ.
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್, ಸರಕು ಸಾಗಣೆಯ ಸಂಚಾರ ಹೆಚ್ಚಿಸಲು ಮತ್ತು ವ್ಯಾಪಾರ ಮಾಡಲು ಸುಲಭವಾಗುವಂತೆ ಉಪ ವಿಭಾಗೀಯ ಮಟ್ಟದಲ್ಲಿಯೂ ಸಹ ವ್ಯಾಪಾರ ಅಭಿವೃದ್ಧಿ ಘಟಕಗಳನ್ನು ರಚಿಸಲು ಪ್ರಾರಂಭಿಸಲಾಗಿದೆ ಎಂದರು. ಬಿ.ಡಿ.ಯು.ನ ನಿರಂತರ ಪ್ರಚಾರದ ಪ್ರಯತ್ನಗಳಿಂದ ಮೈಸೂರು ವಿಭಾಗವು ಮೆಕ್ಕೆಜೋಳದ ಸಾಗಾಣೆ ದಟ್ಟಣೆಯನ್ನು ಮೊದಲಿನ ಮಟ್ಟಕ್ಕೆ ಪುನಃ ಸ್ಥಾಪಿಸಲು ಸಾಧ್ಯವಾಗಿದ್ದು ಮತ್ತು ಸಕ್ಕರೆ ಸಾಗಾಣೆಗಾಗಿ ಹೊಸ ಗ್ರಾಹಕರನ್ನು ಸಹ ಸೆಳೆದಿದೆ.
ಮೊದಲ ಬಾರಿಗೆ ವಿಭಾಗವು, ಮೆಸರ್ಸ್ ಮೈಲಾರ್ ಶುಗರ್ ಕಂಪನಿ ಸಕ್ಕರೆ ಸಾಗಾಣೆಗಾಗಿ ರೈಲ್ವೆ ಸೇವೆ ಬಳಸಿಕೊಳ್ಳುವಂತೆ ಮಾಡಲು ಸಾಧ್ಯವಾಗಿದೆ. 1320 ಟನ್ ಸಕ್ಕರೆಯನ್ನು ಹಾವೇರಿಯ ಶ್ರೀ ಮಹಾದೇವಪ್ಪ ಮೈಲಾರ ರೈಲ್ವೆ ನಿಲ್ದಾಣದಿಂದ ಮಧ್ಯ ರೈಲ್ವೆ ವಲಯದ ಪನ್ವೆಲ್ನ ಮೆಸರ್ಸ್ ನವಕಾರ್ ಕಾರ್ಪ್ ಲಿಮಿಟೆಡ್ಗೆ ಒಟ್ಟು 760 ಕಿ.ಮೀ. ದೂರ ಸಾಗಿಸಿ ಮೈಸೂರು ವಿಭಾಗವು 13 ಲಕ್ಷ ಆದಾಯ ಗಳಿಸಿದೆ. ಎರಡು ವರ್ಷಗಳ ನಂತರ ಈ ವರ್ಷದಲ್ಲಿ ಬಿ.ಡಿ.ಯು.ನ ಪ್ರಯತ್ನದಿಂದಾಗಿ 1330 ಟನ್ ಮೆಕ್ಕೆಜೋಳವನ್ನು ರಾಣೆಬೆನ್ನೂರಿನಿಂದ 2303 ಕಿ.ಮೀ. ದೂರದ ಈಶಾನ್ಯ ರೈಲ್ವೆಯ ರುದ್ರಪುರ ನಗರಕ್ಕೆ ಸಾಗಿಸಿ ವಿಭಾಗಕ್ಕೆ ಸುಮಾರು 32 ಲಕ್ಷ ರೂ. ಆದಾಯ ಬಂದಿದೆ.
ಸರಕು ಸಾಗಣೆಗೆ ಅತ್ಯಂತ ಅನುಕೂಲಕರ, ಸುರಕ್ಷಿತ ಮತ್ತು ವೇಗವಾದ ಮಾರ್ಗವಾಗಿ ರೈಲ್ವೆಯು ಹೊರಹೊಮ್ಮಿದ್ದು, ಪ್ರಚಾರ ತಂಡದ ಅಪಾರ ಪ್ರಯತ್ನಗಳು ಮತ್ತು ಉಪಕ್ರಮಗಳಿಂದಾಗಿ ಈ ತಿಂಗಳಲ್ಲಿ ವಿಭಾಗವು ಸುಮಾರು 45 ಲಕ್ಷ ರೂ. ಹೆಚ್ಚುವರಿ ಆದಾಯ ಗಳಿಸಲು ಸಾಧ್ಯವಾಗಿದೆ. ಸರಕು ಸಾಗಣೆ ಯೋಜನೆಗಳನ್ನು ವಿವರಿಸಲು ಮತ್ತು ರೈಲ್ವೆಯನ್ನು ತಮ್ಮ ಆದ್ಯತೆಯ ಸಾರಿಗೆ ವಿಧಾನವಾಗಿ ಆಯ್ಕೆ ಮಾಡಲು ವ್ಯಾಪಾರಸ್ಥರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ನಿಯಮಿತವಾಗಿ ಗ್ರಾಹಕ ಸಭೆಗಳನ್ನು ನಡೆಸಲಾಯಿತು. ಮೈಸೂರು ವಿಭಾಗವು ಗ್ರಾಹಕರಿಗೆ ಅತ್ಯಂತ ಅನುಕೂಲಕರ ವಾತಾವರಣ ಮತ್ತು ತಮ್ಮ ಸರಕುಗಳಿಗೆ ಅಡೆತಡೆ ಹಾಗೂ ತೊಂದರೆಯಿಲ್ಲದ ಸಾರಿಗೆ ವ್ಯವಸ್ಥೆಯನ್ನು ನೀಡುತ್ತಿದೆ. ಸರಕು ಸಾಗಣೆ ಮತ್ತು ಸಾರಿಗೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಗ್ರಾಹಕರು ಮೈಸೂರು ವಿಭಾಗದ ವ್ಯಾಪಾರ ಅಭಿವೃದ್ಧಿ ಘಟಕವನ್ನು ಸಂಪರ್ಕಿಸಬಹುದು ಅಥವಾ ಸರಕು ಮತ್ತು ಪಾರ್ಸಲ್ ಬುಕ್ಕಿಂಗ್ಗೆ ಪ್ಲೇ ಸ್ಟೋರ್‌ನಿಂದ ಏಕ ಹಂತದ ತಾಣವಾಗಿ ಕಾರ್ಯನಿರ್ವಹಿಸುವ ‘ಸ್ವಿಫ್ಟ್’ (SWIFT) ಅಪ್ಲಿಕೇಶನ್ (ಸರಕು ಸಾಗಣೆಗೆ ಏಕ ಗವಾಕ್ಷಿ ಇಂಟರ್ಫೇಸ್) ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಮೈಸೂರು ವಿಭಾಗದ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.