ಮೈಸೂರು: ಪುನೀತ್ ರಾಜ್‍ಕುಮಾರ್ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಹೆಸರಿನಲ್ಲಿ ಇನ್ನು ಮುಂದೆ ಎರಡು ಚಿನ್ನದ ಪದಕವನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ನೀಡಲಾಗುವುದು ಎಂದು ರಾಘವೇಂದ್ರ ರಾಜ್‍ಕುಮಾರ್ ತಿಳಿಸಿದ್ದಾರೆ.
ಮೈಸೂರು ವಿವಿಯ 102 ನೇ ಘಟಿಕೋತ್ಸವದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ ವರ್ಷದಿಂದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಾರ್ವತಮ್ಮ ರಾಜ್‍ಕುಮಾರ್ ಹೆಸರಿನಲ್ಲಿ ಬಿಸ್ನೆಸ್ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಪುನೀತ್ ರಾಜ್‍ಕುಮಾರ್ ಹೆಸರಿನಲ್ಲಿ ಲಲಿತ ಕಲಾ ವಿಭಾಗದಲ್ಲಿ ಒಂದು ಚಿನ್ನದ ಪದಕ ನೀಡಲಾಗುವುದು ಎಂದರು.
ತಂದೆ, ತಮ್ಮನಿಗೂ ಗೌರವ ಡಾಕ್ಟರೇಟ್: ಜೀವನ ಒಂದು ಚಕ್ರವಿದ್ದಂತೆ. ನಮ್ಮ ತಂದೆಗೂ ಮೈಸೂರು ವಿವಿಯಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿತ್ತು. ಈಗ ನನ್ನ ತಮ್ಮನಿಗೂ ಇದೇ ವಿವಿಯಲ್ಲಿ ಗೌರವ ಡಾಕ್ಟರೇಟ್ ಕೊಟ್ಟಿದ್ದಾರೆ. ಅಪ್ಪು ಮಾಡಿರುವ ಕೆಲಸಗಳು ಮತ್ತು ಸೇವೆಗಳಿಗೆ ಮನ್ನಣೆ ನೀಡಿದ್ದಾರೆ. ಅಪ್ಪು ಯಾವ ಪ್ರಶಸ್ತಿಗಳಿಗೂ ಆಸೆ ಪಡದೆ ಕೆಲಸ ಮಾಡುತ್ತಿದ್ದರು. ಈಗ ಪ್ರಶಸ್ತಿಗಳೇ ಅವರನ್ನು ಹಿಂಬಾಲಿಸುತ್ತಿವೆ. ಇದಕ್ಕೆ ಅಭಿಮಾನಿಗಳೇ ಕಾರಣ ಎಂದು ಹೇಳಿದರು.
ಈ ಗೌರವ ನಮ್ಮ ಕುಟುಂಬದ ಜವಾಬ್ದಾರಿಯನ್ನು ಹೆಚ್ಚಿಸಿದೆ. ಅಶ್ವಿನಿ ಅವರ ಮಾರ್ಗದರ್ಶನದಲ್ಲಿ ಅಪ್ಪು ಅವರಂತೆ ಒಳ್ಳೆಯ ಮಾರ್ಗದಲ್ಲಿ ಸಾಮಾಜಿಕ ಸೇವೆಗಳನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದರು.
ಅಪ್ಪು ಸಾಮಾಜಿಕ ಕಳಕಳಿ ಇರುವ ಚಿತ್ರಗಳನ್ನು ಮಾಡುತ್ತಿದ್ದರು. ರಾಜ್‌ಕುಮಾರ್ ಚಿತ್ರದಲ್ಲಿ ತಂದೆ - ತಾಯಿ ಪ್ರೀತಿಯ ಬಗ್ಗೆ, ಯುವರತ್ನ ಚಿತ್ರದಲ್ಲಿ ಶಿಕ್ಷಣದ ಬಗ್ಗೆ, ಜೇಮ್ಸ್ ಚಿತ್ರದಲ್ಲಿ ನಮ್ಮ ಯೋಧರ ಬಗ್ಗೆ ಹಾಗೂ ಗಂಧದ ಗುಡಿ ಸಿನಿಮಾದಲ್ಲಿ ನಮ್ಮ ಕಾಡಿನ ಬಗ್ಗೆ ಪ್ರಾಣಿ, ಪಕ್ಷಿ ಹಾಗೂ ಅರಣ್ಯ ರಕ್ಷಣೆ ಬಗ್ಗೆ ಅರಿವು ಮೂಡಿಸಿದ್ದಾರೆ. ನಾವು ಅವರ ನೆನಪಿನಲ್ಲಿ ಅವರ ಮಾರ್ಗದರ್ಶನದಲ್ಲಿ ನಡೆದರೆ ನಮ್ಮ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ಮುಂದೆ ಯಾವ ರೀತಿ ಸಾಮಾಜಿಕ ಕೆಲಸ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಇಲ್ಲಿ ಕೂತು ಸುಮ್ಮನೆ ಹೇಳಿದರೆ ಸರಿಯಾಗುವುದಿಲ್ಲ. ನಮ್ಮ ತಂದೆ ಹಾಗೂ ತಮ್ಮ ಹೇಳಿದ ಹಾಗೆ ಕಾರ್ಯರೂಪಕ್ಕೆ ತರಬೇಕು. ಇದನ್ನು ನಾವು ಮಾತನಾಡಬಾರದು, ನೀವು ಮಾತನಾಡಬೇಕು ಎಂದು ಹೇಳಿದರು.