ಮೈಸೂರು: ಅನ್ನಭಾಗ್ಯ ತಿನ್ನುವುದನ್ನು ಆಡಿಕೊಂಡ ಅಡ್ಡಂಡ ಕಾರ್ಯಪ್ಪ ಅವರು ತಿನ್ನುತ್ತಿರುವ ರಂಗಾಯಣದ ಅನ್ನವನ್ನು ಪುನಶ್ಚೇತನಗೊಳಿಸಿದ್ದೇ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿರುದ್ಧ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರ್ನಾಥ್ ವಾಗ್ದಾಳಿ ನಡೆಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಡ್ಡಂಡ ಕಾರ್ಯಪ್ಪ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದು, ಇದರ ಬಗ್ಗೆ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ರಂಗಾಯಣವನ್ನು ದುರುಪಯೋಗ ಮಾಡಿಕೊಂಡವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಹಸಿದವರ ನೋವು ಕಾರ್ಯಪ್ಪಗೆ ಗೊತ್ತೇ? ಕೊರೊನಾ ಪರಿಸ್ಥಿತಿಯ ಬಗ್ಗೆ ಸಂಸ್ಥೆಯೊಂದು ಅಧ್ಯಯನ ಮಾಡಿದ ವೇಳೆ ಇಂದಿರಾ ಕ್ಯಾಂಟೀನ್ ಹಾಗೂ ಅನ್ನಭಾಗ್ಯ ಯೋಜನೆ ಇರಲಿಲ್ಲ ಅಂದಿದ್ದರೆ, ಈ ರಾಜ್ಯದ ಜನತೆ ಕೊರೊನಾದಿಂದಲ್ಲ, ಹಸಿವಿನಿಂದಲೇ ಸಾವನ್ನಪ್ಪುತ್ತಿದ್ದರು ಎಂಬ ವರದಿ ಮಾಡಿದೆ. ಇದರ ಬಗ್ಗೆ ಅರಿತು ಮಾತನಾಡಬೇಕು. ಅಭಿವೃದ್ಧಿ ವಿಚಾರದಲ್ಲಿ ಬಹಿರಂಗವಾಗಿ ಚರ್ಚೆಗೆ ಬರಲು ಒಪ್ಪದ ಬಿಜೆಪಿ, ಹೀಗೆ ರಂಗಾಯಣದ ನಾಟಕದ ಮೂಲಕ ನಮ್ಮ ನಾಯಕರನ್ನು ಅವಹೇಳನ ಮಾಡುತ್ತಿದೆ. ಶೇ. 40 ಕಮಿಷನ್ ಪಡೆದಿದ್ದೆ ನಿಮ್ಮ ನಾಲ್ಕು ವರ್ಷದ ಸಾಧನೆ ಎಂದು ಕುಟುಕಿದರು.
ಮೈಸೂರಿನ ಮಹಿಳೆ ಮೇಲೆ ದೌರ್ಜನ್ಯ ನಡೆದು ಪೊಲೀಸ್ ಇಲಾಖೆ ಮುಂದೆ ಹೋಗಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಸ್ಯಾಂಟ್ರೋ ರವಿ ಎಂಬ ವ್ಯಕ್ತಿ ಬಿಜೆಪಿಯೊಂದಿಗೆ ಸೇರಿಕೊಂಡಿದ್ದಾರೆ ಎಂದು ಆರೋಪಿಸಿದ ಪುಷ್ಪ ಅಮರ್ನಾಥ್, ಸ್ಯಾಂಟ್ರೋ ರವಿ ಪತ್ನಿಯೇ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿ, ನ್ಯಾಯ ಒದಗಿಸಲು ಬೊಮ್ಮಾಯಿಯವರ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ತಾಕತ್ತಿದ್ದರೆ ಇದರ ಹಿಂದೆ ಯಾರ್ಯಾರು ಇದ್ದಾರೆಂಬುದರ ಕುರಿತು ಸಮಗ್ರ ತನಿಖೆ ನಡೆಸಲಿ, ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಲಿ ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ ಸವಾಲು
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಶೇ.30ರಷ್ಟು ಮಹಿಳಾ ಮೀಸಲು ಸಿಕ್ಕಿದೆ. ಆದುದರಿಂದಲೇ ನಾವೆಲ್ಲೂ ಈ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ. ಕಾಂಗ್ರೆಸ್ ಪಕ್ಷದಿಂದಲೇ ಶೇ.40ರಷ್ಟು ಮೀಸಲಾತಿ ಯುಪಿ ಚುನಾವಣೆಯಲ್ಲಿ ನೀಡಿದ್ದಾರೆ. 56 ಇಂಚಿನ ಎದೆಯವರಲ್ಲಿ ಈ ಆಲೋಚನೆ ಏಕೆ ಬರುತ್ತಿಲ್ಲ? ಬಿಜೆಪಿ ಶೇ.30 ಮೀಸಲಾತಿ ನೀಡುವುದಾಗಿ ಹೇಳುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಮೀಸಲು ವಿಚಾರ ರಾಜ್ಯಸಭೆಯಲ್ಲಿ ಬೆಂಬಲ ಇಲ್ಲದೆ ಅಲ್ಲೇ ಉಳಿದಿದೆ. ಬಿಜೆಪಿ 'ಬೇಟಿ ಬಚಾವೋ, ಬೇಟಿ ಪಡಾವೋʼ ಮಾಡಿಯೇ ಇಲ್ಲ. ನಿರಂತರವಾಗಿ ಬಿಜೆಪಿ ಕೃಪಾಪೋಷಿತದಲ್ಲಿ ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ ಶೇ.50ರಷ್ಟು ಮಹಿಳಾ ಮೀಸಲು ಘೋಷಿಸಬೇಕು ಎಂದು ಒತ್ತಾಯಿಸಿದರು.
23 ಕ್ಷೇತ್ರದಿಂದ ಅರ್ಜಿ: ರಾಜ್ಯದ 23 ವಿಧಾನಸಭಾ ಕ್ಷೇತ್ರದಿಂದ 108 ಕಾಂಗ್ರೆಸ್ ಮಹಿಳಾ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದಾರೆ. ಗೆಲ್ಲುವ ಸಾಮರ್ಥ್ಯ ಇರುವವರಿಗೆ ಪಕ್ಷವು ಟಿಕೆಟ್ ನೀಡಲಿದೆ. ಹಾಲಿ ಐದು ಶಾಸಕಿಯರು ಸಹ ಅರ್ಜಿ ಹಾಕಿದ್ದಾರೆ. ನಾನು ಸಹ ಕ್ಷೇತ್ರ ಗುರುತಿಸಿಲ್ಲ. ಅವಕಾಶ ಕೊಟ್ಟರೆ ಸ್ಪರ್ಧೆಸುತ್ತೇನೆ. ಹೀಗಾಗಿ ಅರ್ಜಿ ಸಲ್ಲಿಸುತ್ತೇನೆ ಎಂದರು. ಇದೇ ವೇಳೆ ಜ.16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಹಿಳಾ ಘಟಕದಿಂದ ʻನಾ ನಾಯಕಿʼ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಗಾಂಧಿ ಆಗಮಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಜ.16 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ 'ನಾ ನಾಯಕಿ' ಸಮಾವೇಶ: ಪ್ರಿಯಾಂಕ ಗಾಂಧಿ ಆಗಮನ