ಮೈಸೂರು: ಕಬ್ಬಿನ ಬಾಕಿ ಪಾವತಿ, ಪಂಪ್ಸೆಟ್ಗೆ ವಿದ್ಯುತ್ ಪೂರೈಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಿದರು. ರಾಜ್ಯ ರೈತ ಸಂಘಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಗರದ ಲಲಿತ್ ಮಹಲ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಮೆರವಣಿಗೆ ನಡೆಯಿತು. ನಂತರ ಡಿಸಿ ಕಚೇರಿಯ ಮುಂಭಾಗದ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮುಂದುವರೆಸಿದರು.
ಕಬ್ಬಿನ 150 ರೂ. ಬಾಕಿ, ಕೃಷಿ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್, ನಾಲೆಗಳಿಗೆ ನೀರು ಬಿಡಲು ಮತ್ತು ಕಬ್ಬಿಗೆ ಎಫ್ಆರ್ಪಿ ದರದ ಆಧಾರದ ಮೇಲೆ ರೈತರಿಗೆ ಕಾರ್ಖಾನೆಗಳು ಹಣ ಪಾವತಿ ಮಾಡುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಸರ್ಕಾರವನ್ನು ಒತ್ತಾಯಿಸಿದರು. ಹಿಂದಿನ ಸರ್ಕಾರವೂ ರೈತರ ಯಾವುದೇ ಬೇಡಿಕೆಗಳನ್ನು ಈಡೇರಿಸಿರಲಿಲ್ಲ. ಈಗ ಹೊಸ ಸರ್ಕಾರ ಬಂದಿದೆ, ರೈತರ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಸರ್ಕಾರ ಬಂದು ಹಲವು ತಿಂಗಳಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೆರವಣಿಗೆಯಲ್ಲಿ ಆಗಮಿಸಿದ ರೈತರನ್ನು ಪೊಲೀಸರು ಡಿಸಿ ಕಚೇರಿಯ ಒಳಬಿಡದೇ ಇದ್ದುದರಿಂದ ಕಚೇರಿ ಮುಂಭಾಗದ ರಸ್ತೆಯಲ್ಲೇ ರೈತರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಬರುವಂತೆ ಆಗ್ರಹಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ರೈತರನ್ನು ವಶಕ್ಕೆ ಪಡೆಯಲು ಮುಂದಾದರು. ಆಗ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಮದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: Leopard: ದಾವಣಗೆರೆಯಲ್ಲಿ ಚಿರತೆ ಪ್ರತ್ಯಕ್ಷ; ಸೆರೆಗೆ ಬೋನಿರಿಸಿದ ಅರಣ್ಯ ಇಲಾಖೆ
ತಮಿಳುನಾಡಿಗೆ ನೀರು ಬಿಡುವ ಮುನ್ನ ನಾಲೆಗಳಿಗೆ ನೀರು ಹರಿಸಲಿ: ಕಾವೇರಿ ಭಾಗದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುವ ಮುನ್ನ ನಾಲೆಗಳಿಗೆ ನೀರು ಹರಿಸಿ, ರಾಜ್ಯದ ರೈತರ ಹಿತ ಕಾಪಾಡಬೇಕು ಎಂದು ಆ.6ರಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದರು. ಜಲದರ್ಶಿನಿ ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ರಾಜ್ಯದ ಸಂಕಷ್ಟ ಕಾಲದಲ್ಲೂ ಸ್ಥಳೀಯ ರೈತರನ್ನು ನಿರ್ಲಕ್ಷಿಸಿ ಕಬಿನಿ, ಕಾವೇರಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿ, ಅಚ್ಚುಕಟ್ಟು ಭಾಗದ ರೈತರನ್ನು ಬಲಿ ಕೊಡುವುದು ಸರಿಯಲ್ಲ. ಜಲಾಶಯದ ಎಲ್ಲ ನಾಲೆಗಳಿಗೆ ನೀರು ಹರಿಸಿ ರೈತರು ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕು ಎಂದು ಹೇಳಿದ್ದರು.
ಹತ್ತಿ ಬೆಳೆಗೆ ಬೆಳೆ ವಿಮಾ ಪರಿಹಾರ ಇನ್ನೂ ಬಂದಿಲ್ಲ. ಕೂಡಲೇ ನಷ್ಟದ ಪರಿಹಾರ ಕೊಡಿಸಬೇಕು. ಕೃಷಿ ಪಂಪಸೆಟ್‌ಗಳಿಗೆ ಹಗಲು ವೇಳೆ 12 ಗಂಟೆ ಕಾಲ ವಿದ್ಯುತ್ ನೀಡಬೇಕು. ಕಬ್ಬಿನ 150 ರೂ. ಬಾಕಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಸಕ್ಕರೆ ಕಾರ್ಖಾನೆ ಉಪಕಚೇರಿ ಮುಂದೆ ಪ್ರತಿಭಟಿಸಿ ಆಗ್ರಹಿಸಿದರೂ, ಸಮಸ್ಯೆ ಬಗೆಹರಿದಿಲ್ಲ ಎಂದು ದೂರಿದ್ದರು.