ಮೈಸೂರು : ಹುಣಸೂರನ್ನು ಹೊಸ ಜಿಲ್ಲೆಯನ್ನಾಗಿ ಮಾಡಬೇಕೆಂದು ಮನವಿ ಮಾಡಿರುವ ಅನರ್ಹ ಶಾಸಕ ಹೆಚ್.ವಿಶ್ವನಾಥ್ ನಡೆ ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ ನಡೆಯಿತು.
ಪ್ರತಿ 30 ಕಿ.ಮೀಗೆ ಒಂದು ಜಿಲ್ಲೆ ಮಾಡಲು ಹೇಗೆ ಸಾಧ್ಯ? ಹೀಗೆ 3 ತಾಲೂಕನ್ನು ಸೇರಿಸಿ ಹೊಸ ಜಿಲ್ಲೆಯನ್ನಾಗಿ ಮಾಡುತ್ತಾ ಹೋದರೆ ರಾಜ್ಯದಲ್ಲಿ 20ಕ್ಕೂ ಹೆಚ್ಚು ಹೊಸ ಜಿಲ್ಲೆಗಳಾಗುತ್ತವೆ. ಎಲ್ಲಾ ಅತೃಪ್ತ ಶಾಸಕರಿಗೆ ಒಂದೊಂದು ಜಿಲ್ಲೆಯನ್ನು ಉಸ್ತುವಾರಿ ಕೊಡಬಹುದು. ರಾಜಕೀಯ ಗಿಮಿಕ್‌ಗಾಗಿ ಮೊದಲಿನಿಂದಲೂ ಹೆಚ್.ವಿಶ್ವನಾಥ್ ತಮ್ಮ ಮನಸ್ಸಿಗೆ ಬಂದಂತೆ ಅವೈಜ್ಞಾನಿಕ ಹೇಳಿಕೆಗಳನ್ನು ನೀಡಿ, ಈಗಾಗಲೇ ಮುಜುಗರಕ್ಕೆ ಒಳಗಾಗಿದ್ದಾರೆ. ಈಗ ಮಾನಸಿಕ ಸ್ಥಿಮಿತ ಕಳೆದುಕೊಂಡು ಅಧಿಕಾರಕ್ಕಾಗಿ ಈ ಕೀಳು ಮಟ್ಟದ ರಾಜಕೀಯ ಮಾಡುತ್ತಿರುವುದುದ ಖಂಡನೀಯವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ನಗರಿ ಮೊದಲಿನಿಂದಲೂ ತನ್ನದೇ ಆದ ಪ್ರಖ್ಯಾತಿ ಪಡೆದಿದ್ದು, ಪ್ರವಾಸಿಗರು ಮೈಸೂರಿಗೆ ಬರುವ ಸಂಖ್ಯೆಯು ಹೆಚ್ಚಾಗಿದೆ. ದೊಡ್ಡ ರಾಜ್ಯವಾಗಿದ್ದ ಮೈಸೂರು ಸಂಸ್ಥಾನವನ್ನು ಮಹಾರಾಜರು ಮುಂದಾಲೋಚನೆಯಿಂದ ಮೈಸೂರು ಜಿಲ್ಲೆಯನ್ನಾಗಿ ಮಾಡಿ ಕರ್ನಾಟಕ ರಾಜ್ಯಕ್ಕೆ ಸೇರಿಸಿದರು. ಈಗ ತಮ್ಮ ರಾಜಕೀಯಕ್ಕೆ ಮೈಸೂರನ್ನು ಇಬ್ಭಾಗ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಆದ್ದರಿಂದ ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಮೈಸೂರು ಜಿಲ್ಲೆ ವಿಭಜನೆ ಮಾಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.