ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಪ್ರೀತಿಯನ್ನು ಕುಂದನ ಕಲೆಯ ಮೂಲಕ ಕಲಾವಿದ ಒಂದು ವರ್ಷಗಳ ಕಾಲ ಕೆತ್ತನೆ ಮಾಡುವ ಮೂಲಕ ಅದ್ಭುತವಾಗಿ ಮೂಡಿಸಿದ್ದಾನೆ. ವಿಭಿನ್ನ ಶೈಲಿಯ ಕಲೆಯ ಮೂಲಕ ಮೋದಿ ತಾಯಿಯನ್ನು ಭೇಟಿ ಮಾಡಿದ್ದ ಸಂದರ್ಭವನ್ನು ರಚಿಸಿದ್ದು, ಅದ್ಭುತವಾಗಿ ಮೂಡಿಬಂದಿದೆ.
ಕಲಾವಿದ ಭಾನು ಪ್ರಕಾಶ್ ಮೈಸೂರು ಮೂಲದವರಾಗಿದ್ದು, ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಲಂಡನ್ನಲ್ಲಿ 4 ವರ್ಷ ಸೇರಿ 11 ವರ್ಷಗಳ ಕಾಲ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಕುಂದನ ಕಲೆಯ ಮೇಲೆ ಆಸಕ್ತಿ ಹೊಂದಿ ತಮ್ಮ ವೃತ್ತಿಯನ್ನು ತ್ಯಜಿಸಿ ಕಲಾಕೃತಿ ರಚನೆಗಿಳಿದಿದ್ದಾರೆ.
ಬಳಿಕ 4 ವರ್ಷದ ಹಿಂದೆ ಮೈಸೂರಿಗೆ ಬಂದು ಕ್ರಾಫ್ಟ್ ಮೆಲೆನ್ ಎಂಬ ಕಲಾ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಕುಂದನ ಕಲೆಗೆ 400 ವರ್ಷಗಳ ಇತಿಹಾಸ ಇದ್ದು, ಮೈಸೂರು ಮಹಾರಾಜರ ಕಾಲದಲ್ಲಿ ಈ ಕಲೆ ತುಂಬಾ ಪ್ರಸಿದ್ಧಿ ಪಡೆದಿದ್ದು, 2000ಕ್ಕೂ ಹೆಚ್ಚು ಜನ ಕಲಾವಿದರಿದ್ದರು. ಕಾಲ ಕ್ರಮೇಣ ಈ ಕಲೆ ಕ್ಷೀಣಿಸತೊಡಗಿದ್ದು, ರಾಜ್ಯದಲ್ಲೀಗ 200 ಮಂದಿ ಮಾತ್ರ ಕುಂದನ ಕಲಾವಿದರಿದ್ದಾರೆ.
ಕುಂದನ ಕಲೆ (ಇನ್-ಲೇ) ಎಂದರೇನು ?
ಮರದಿಂದ ಕೆತ್ತನೆ ಕೆಲಸವನ್ನು ಹಾಗೂ ಕತ್ತರಿಸಿದ ಮರದ ತುಂಡುಗಳಿಂದ ಕಲೆಗಳನ್ನು ರೂಪಿಸುವುದೇ ಈ ಕುಂದನ ಕಲೆಯಾಗಿದ್ದು, ಮೈಸೂರಿನ ಭಾನು ಪ್ರಕಾಶ್ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಪ್ರೀತಿಯನ್ನು ಕುಂದನ ಕಲೆಯ ಮೂಲಕ ಕಳೆದ 1 ವರ್ಷಗಳಿಂದ 25 ಜನ ಕಲಾವಿದರನ್ನು ಸೇರಿಸಿ, 10 ಬೇರೆ ಬೇರೆ ಜಾತಿಯ ವಿಶಿಷ್ಟ ಮರಗಳನ್ನು ಬಳಸಿ 7 ಅಡಿ ಅಗಲ, 5 ಅಡಿ ಉದ್ದದ ಕಲಾಕೃತಿ ಮಾಡಿ ತಾಯಿ ಪ್ರೀತಿಯನ್ನು ಈ ಕಲೆಯ ಮೂಲಕ ಸಮರ್ಪಿಸಿದ್ದಾರೆ. ಇನ್ನೂ ಈ ಕಲಾಕೃತಿ ಸೂರತ್ನಲ್ಲಿ ಪ್ರದರ್ಶನವಾಗಲಿದೆ.