ಮೈಸೂರು: ಯಾರು ಏನೇ ಅಂದರೂ ನನ್ನ ಮಾತಿನಿಂದ ಹಿಂದೆ ಸರಿಯುವ ಮಾತೇ ಇಲ್ಲ. ಈ ವಿಚಾರದಲ್ಲಿ ನನ್ನ ನಿಲುವು ಬದಲಾಗುವುದಿಲ್ಲ ಎಂದು ಗುಂಬಜ್ ಮಾದರಿಯ ಗೋಪುರಗಳನ್ನು ತೆರವುಗೊಳಿಸಬೇಕು ಎಂಬ ತಮ್ಮ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ ಎಂದರು.
ಜಿಲ್ಲಾಧಿಕಾರಿಗಳು ಸಮಯ ಕೇಳಿದ್ದಾರೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ನಿಲ್ದಾಣ ತೆರವು ಮಾಡುವಂತೆ ನೋಟಿಸ್ ನೀಡಿದ್ದಾರೆ. ಸ್ವಲ್ಪ ಕಾಲಾವಕಾಶ ನೀಡುತ್ತೇನೆ. ಆದರೆ ನನ್ನ ನಿಲುವಿನಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳಿಗೆ ನೀಡಿದ ಹೇಳಿಕೆ ನೀಡಿದ್ದಾರೆ.
ಇಂದು ತಮ್ಮ ಜಲದರ್ಶಿನಿ ಆವರಣದಲ್ಲಿರುವ ಸಂಸದರ ಕಚೇರಿಯ ಮುಂಬಾಗದಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಅವರು, ಯಾರು ಏನೇ ಅಂದ್ರೂ ನನ್ನ ಮಾತು ಹಾಗೂ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸತತ ಹಲವು ವರ್ಷಗಳ ಕಾಲ ಪ್ರಯತ್ನಿಸಿ ಟಿಪ್ಪು ಹೆಸರಿನ ರೈಲಿಗೆ ಒಡೆಯರ್ ಹೆಸರು ಇಟ್ಟು ಬದಲಾಯಿಸಿದ್ದೇನೆ. ಅದೇ ರೀತಿ ನಿಲ್ದಾಣಕ್ಕೆ ಮೇಲ್ಭಾಗದಲ್ಲಿ ಗುಂಬಜ್ ಮಾದರಿಯ ಗೋಪುರಗಳನ್ನು ತೆರವು ಮಾಡಬೇಕು ಎಂದರು.
ಸದ್ಯ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದಿಂದ ನೋಟಿಸ್ ನೀಡಿದ್ದಾರೆ. ಕೆ.ಐ.ಆರ್.ಡಿ.ಎಲ್ ಮಾದರಿಯಲ್ಲೇ ಕಟ್ಟಡ ನಿರ್ಮಾಣ ಮಾಡಿದರೆ ತಪ್ಪಲ್ಲ. ಆದರೆ ನಕ್ಷೆಯಲ್ಲಿ ಗೋಪುರಗಳಿಲ್ಲ. ಈಗ ನಿರ್ಮಾಣವಾಗಿರುವ ಗೋಪುರಗಳನ್ನು ತೆರವುಗೊಳಿಸಬೇಕು. ಇದಕ್ಕೆ ಕಾಲವಾಕಾಶ ಕೊಟ್ಟಿದ್ದೇನೆ, ಅವರ ಗಡುವಿಗೆ ಕಾಯುತ್ತಿದ್ದೇನೆ. ಆದರೆ ಈಗಲೂ ಕಾಲಾವಕಾಶ ಮುಗಿದ ಮೇಲೆ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ. ಆದರೆ ಕೆ.ಐ.ಆರ್.ಡಿ.ಎಲ್ ನಿರ್ಣಯಕ್ಕೆ ನಾನು ಬದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಇನ್ನು, ಸಾರ್ವಜನಿಕ ಹಣದಲ್ಲಿ ಕಟ್ಟಿರುವ ಕಟ್ಟಡದಲ್ಲಿ ಯಾವ ಶಾಸಕ, ಸಂಸದ ಒಂದು ರೂಪಾಯಿ ಹಾಕಿಲ್ಲ. ಅದು ಸಾರ್ವಜನಿಕರ ಹಣ. ಈ ಹಣದಲ್ಲಿ ನಿರ್ಮಾಣವಾಗಿರುವ ಮಾದರಿ ಪ್ರಾಧಿಕಾರದ ಅನುಮತಿ ಪಡೆಯದೆ ಅನಧಿಕೃತವಾಗಿ ನಿರ್ಮಾಣವಾಗಿರುವ ಕಟ್ಟಡವಾಗಿದ್ದು, ಇದರಲ್ಲಿ ಯಾರ ಭಾವಚಿತ್ರವನ್ನು ಹಾಕದಂತೆ ಕೋರ್ಟ್ ಆದೇಶ ನೀಡಿದೆ. ಖಾಸಗಿ ಬಡಾವಣೆಯಲ್ಲಿ ಒಂದು ಗಿಡವನ್ನು ನೆಡಬೇಕಾದರೆ ಅನುಮತಿ ಬೇಕು. ಆದರೆ, ರಾಷ್ಟ್ರೀಯ ಪ್ರಾಧಿಕಾರದ ಅನುಮತಿ ಪಡೆಯದೇ ಹೇಗೆ ಬಸ್ ನಿಲ್ದಾಣ ನಿರ್ಮಾಣವಾಯಿತು ಎಂದು ಗುಂಬಜ್ ಮಾದರಿಯ ಬಸ್ ನಿಲ್ದಾಣದ ನಿರ್ಮಾಣದ ಬಗ್ಗೆ ಸಂಸದರು ಪ್ರಶ್ನೆ ಎತ್ತಿದರು.
ಕಿರುಕುಳ ವಿಚಾರಕ್ಕೆ ಪ್ರತಿಕ್ರಿಯೆ: ಶಾಸಕ ಎಸ್ ಎ ರಾಮದಾಸ್ಗೆ ಕಿರುಕುಳ ನೀಡುವಷ್ಟು ದೊಡ್ಡ ಮನುಷ್ಯ ನಾನಲ್ಲ. ಕಿರುಕುಳ ಆಗುವುದು ಟಿಪ್ಪು ಅನುಯಾಯಿಗಳಿಗೆ, ಶಿವಾಜಿ ಮಹಾರಾಜರ ಅನುಯಾಯಿಗಳಿಗೆ ಅಲ್ಲ. ರಾಮದಾಸ್ 29 ವರ್ಷದ ಹಿಂದೆಯೇ ಶಾಸಕರಾದವರು. ಮೋದಿಯಿಂದ ಮೆಚ್ಚುಗೆ ಪಡೆದವರು, ಅವರಿಗೆ ಕಿರುಕುಳ ಕೊಡುವಷ್ಟು ದೊಡ್ಡವನಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.
ರಾಮದಾಸ್ ಇನ್ನೂ 10 ಅಥವಾ 15 ಬಸ್ ನಿಲ್ದಾಣ ಕಟ್ಟಲಿ ನನ್ನದೇನು ಅಭ್ಯಂತರವಿಲ್ಲ. ಆದರೆ ಎಲ್ಲಾ ಅಭಿವೃದ್ಧಿಗಳು ಮಹಾರಾಜರ ಪರಂಪರೆಯ ರೀತಿ ಇರಬೇಕು. ಗುಂಬಜ್ಗು ಇಂಡೋ ಸಾರ್ಶನಿಕ್ ಕಲೆಗೂ ತುಂಬಾ ವ್ಯತ್ಯಾಸವಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕೆಂದು ಸಂಸದರು ಹೇಳಿದರು.
ಇದನ್ನೂ ಓದಿ: ಬಸ್ ನಿಲ್ದಾಣದ ಮೇಲಿನ ಗುಂಬಜ್ ತೆರವು ಶತಸಿದ್ಧ: ಪ್ರತಾಪಸಿಂಹ