ಮೈಸೂರು: ಸಾರ್ವತ್ರಿಕ ಲೋಕಸಭಾ ಚುನಾವಣೆ ಫಲಿತಾಂಶ ಇನ್ನೇನು ಹೊರ ಬೀಳಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಹಾಗೂ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ನಡುವೆ ನೇರಾನೇರ ಹಣಾಹಣಿ ನಡೆದಿದೆ. ಆದರೆ, ಇಲ್ಲಿ ಬಿಎಸ್ಪಿ ಅಭ್ಯರ್ಥಿ ಡಾ. ಬಿ. ಚಂದ್ರ ಅವರು ತೆಗೆದುಕೊಳ್ಳುವ ಮತಗಳೇ ನಿರ್ಣಾಯಕ ಎಂದು ವಿಶ್ಲೇಷಿಸಲಾಗುತ್ತಿದೆ.
1991ರಲ್ಲಿ ನಡೆದ ಹುಣಸೂರು ವಿಧಾನಸಭಾ ಉಪಚುನಾವಣೆ ಮೂಲಕ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯ ಕಣಕ್ಕಿಳಿದ ಸಿ.ಎಚ್.ವಿಜಯಶಂಕರ್ ಮೊದಲ ಪ್ರಯತ್ನದಲ್ಲೇ ಎಸ್.ಚಿಕ್ಕಮಾದು ವಿರುದ್ಧ ಸೋಲು ಕಂಡರು. ನಂತರ 1994ರಲ್ಲಿ ಹುಣಸೂರು ವಿಧಾನಸಭಾ ಚುನಾವಣೆಯಲ್ಲಿ ವಿ.ಪಾಪಣ್ಣ ವಿರುದ್ಧ ವಿಜಯಶಂಕರ್ ಗೆಲುವು ಕಂಡಿದ್ದರು. 1998ರಲ್ಲಿ ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸಿದ್ದ ವಿಜಯಶಂಕರ್, ಪ್ರತಿಸ್ಪರ್ಧಿ ಚಿಕ್ಕಮಾದು ವಿರುದ್ಧ ಗೆಲುವು ಕಂಡು ಸಂಸತ್ ಪ್ರವೇಶಿಸಿದರು. 1999ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಎದುರು ಸಿ.ಎಚ್.ವಿಜಯಶಂಕರ್ ಸೋಲುಂಡಿದ್ದರು. 2004ರಲ್ಲಿ ಎ.ಎಸ್.ಗುರುಸ್ವಾಮಿ ವಿರುದ್ಧ ವಿಜಯಶಂಕರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವಿನ ಕುದುರೆ ಏರಿದರು. 2009ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಎಚ್.ವಿಶ್ವನಾಥ್ ವಿರುದ್ಧ ಸಿ.ಎಚ್.ವಿಜಯಶಂಕರ್ ಪರಾಭವಗೊಂಡಿದ್ದರು. 2014ರಲ್ಲಿ ಬದಲಾದ ರಾಜಕೀಯ ವಾತಾವರಣದಿಂದ ಸಿ.ಎಚ್ .ವಿಜಯಶಂಕರ್ ಅವರು ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಫರ್ಧಿಸಿ ಎಚ್.ಡಿ.ದೇವೇಗೌಡರ ವಿರುದ್ಧ ಸೋಲು ಕಂಡಿದ್ದರು. ಇದೀಗ ಪ್ರತಾಪ್ ಸಿಂಹ ವಿರುದ್ಧ ಪಕ್ಷ ಬದಲಿಸಿ ವಿಜಯಶಂಕರ್ ಅಖಾಡಕ್ಕಿಳಿದಿದ್ದಾರೆ.
ಈ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ.69.25 ಮತದಾನವಾಗಿದ್ದು, ಕಳೆದ ಬಾರಿಗೆ(ಶೇ.67.21)ಹೋಲಿಕೆ ಮಾಡಿದರೆ ಮತದಾನ ಪ್ರಮಾಣ ಶೇ.2.04ರಷ್ಟು ಏರಿಕೆಯಾಗಿದೆ. ಒಟ್ಟು 18,94,372 ಮತದಾರರ ಪೈಕಿ 9,44,577 ಪುರುಷರು, 9,49,702 ಮಹಿಳೆಯರು, 127 ಮಂಗಳಮುಖಿ ಮತದಾರರು ಇದ್ದಾರೆ. ಈ ಪೈಕಿ 6,64,712 ಪುರುಷರು, 6,47,203 ಮಹಿಳೆಯರು, 14 ಮಂಗಳಮುಖಿಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಪಿರಿಯಾಪಟ್ಟಣದಲ್ಲಿ ಅತಿಹೆಚ್ಚು (ಶೇ.78.86), ಚಾಮರಾಜದಲ್ಲಿ ಅತಿಕಡಿಮೆ (ಶೇ.59.93) ಮತದಾನವಾಗಿದೆ.
ಮೇಲ್ನೋಟಕ್ಕೆ ಪ್ರತಾಪ್ ಸಿಂಹ ಹಾಗೂ ವಿಜಯಶಂಕರ್ ನಡುವೆ ಬಿಗ್ ಫೈಟ್ ಇದೆ. ಆದರೆ, ಜೆಡಿಎಸ್- ಕಾಂಗ್ರೆಸ್ನ ಒಳ ಜಗಳ ಪ್ರತಾಪ್ ಸಿಂಹಗೆ ಲಾಭ ತಂದುಕೊಡುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಬಂಟ ವಿಜಯಶಂಕರ್ ಗೆಲ್ಲಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಅಂತಿಮವಾಗಿ ಫಲಿತಾಂಶವೇ ಎಲ್ಲರಿಗೂ ಉತ್ತರ ಕೊಡಬೇಕಿದೆ.