ಮೈಸೂರು: ಮೈಸೂರು ರೈಲು ನಿಲ್ದಾಣದ ಒತ್ತಡ ತಗ್ಗಿಸಿ ಉನ್ನತ ದರ್ಜೆಗೇರಿಸುವ ಸಲುವಾಗಿ 395.73 ಕೋಟಿ ರೂ. ವೆಚ್ಚದಲ್ಲಿ ರೈಲು ನಿಲ್ದಾಣದ ವಿಸ್ತರಣೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಯೋಜನಾ ವರದಿ ಸಿದ್ಧವಾದ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಪ್ರತಾಪ್ ಸಿಂಹ ತಿಳಿಸಿದರು. ಕೇಂದ್ರ ರೈಲ್ವೆ ನಿಲ್ದಾಣದ ಅಗಲೀಕರಣ ಸಂಬಂಧ ರೈಲ್ವೆ ವಿಭಾಗೀಯ ವ್ಯವಸ್ಥಾಪಕರ ಕಚೇರಿಯಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿ ಬಳಿಕ ಅವರು ಮಾತನಾಡಿದರು.
2018ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಮೈಸೂರು ದಶಪಥ ರಸ್ತೆ, ನಾಗನಹಳ್ಳಿ ರೈಲ್ವೆ ಟರ್ಮಿನಲ್ ನಿರ್ಮಾಣದ ಘೋಷಣೆ ಮಾಡಿದ್ದರು. ದಶಪಥ ರಸ್ತೆ ಮುಗಿಯುವ ಹಂತಕ್ಕೆ ಬಂದಿದೆ. ಭೂ ಸ್ವಾಧೀನ ವಿಳಂಬವಾದ ಹಿನ್ನೆಲೆಯಲ್ಲಿ ನಾಗನಹಳ್ಳಿ ಟರ್ಮಿನಲ್ ನಿರ್ಮಾಣ ಸಾಧ್ಯವಾಗಿಲ್ಲ. ಮೈಸೂರಿಗೆ ಹೆಚ್ಚುವರಿ ರೈಲುಗಳು ಬರುತ್ತಿದ್ದು ನಿಲ್ದಾಣದಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ರೈಲು ನಿಲ್ದಾಣದ ಪಕ್ಕದ 65 ಎಕರೆ ಜಾಗದಲ್ಲಿರುವ ಕ್ವಾರ್ಟರ್ಸ್ ನೆಲಸಮ ಮಾಡಿ ನಿಲ್ದಾಣ ವಿಸ್ತರಣೆ ಮಾಡಲಾಗುವುದು ಎಂದರು.
ರೈಲು ನಿಲ್ದಾಣದಲ್ಲಿ 3 ಹೆಚ್ಚುವರಿ ಫ್ಲಾಟ್‌ಫಾರ್ಮ್ ಲೈನ್, 4 ಹೆಚ್ಚುವರಿ ಪಿಟ್ ಲೈನ್, 4 ಹೆಚ್ಚುವರಿ ಸ್ಥಿರ ಲೈನ್, 1 ಹೆಚ್ಚುವರಿ ಶಂಟಿಗ್ ನೆಕ್ ನಿರ್ಮಾಣ ಮಾಡಲಾಗುವುದು. ಪ್ರಧಾನಿ ಮೋದಿಯವರು ಜೂ.20ರಂದು ಆಯುಷ್‌ನ ನೂತನ ಕಟ್ಟಡ ಉದ್ಘಾಟಿಸಲಿದ್ದು, ಅಂದೇ ಈ ಯೋಜನೆಗೂ ಭೂಮಿಪೂಜೆ ನೆರವೇರಿಸಲಾಗುತ್ತದೆ. ಬೇರೆ ಕಡೆ ಕ್ವಾರ್ಟರ್ಸ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ರಾಜವಂಶಸ್ಥರಿಗೆ ಆಹ್ವಾನ: ಜೂ.21ರಂದು ಅರಮನೆ ಆವರಣದಲ್ಲಿ ನಡೆಯುವ ಯೋಗ ಕಾರ್ಯಕ್ರಮಕ್ಕೆ ರಾಜವಂಶಸ್ಥರಿಗೆ ಆಹ್ವಾನ ನೀಡಲಾಗಿದೆ. ವಿಶ್ವವಿಖ್ಯಾತ ಅರಮನೆ ನಿರ್ಮಿಸಿ ಮೈಸೂರಿಗೆ ಹೆಸರು ತಂದುಕೊಟ್ಟವರು ರಾಜವಂಶಸ್ಥರು. ಹಿಂದೆ ಸರ್ಕಾರದಲ್ಲಿ ಕೆಲ ಬದಲಾವಣೆಯಾಗಿ ಅರಮನೆಯನ್ನು ಸರ್ಕಾರದ ವಶಕ್ಕೆ ಪಡೆದಿರಬಹುದು. ಆದರೂ ಅರಮನೆ ರಾಜರದ್ದೇ. ಹೀಗಾಗಿ ಯೋಗ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ರಾಜವಂಶಸ್ಥರಿಗೆ ಅವಕಾಶವಿದೆ. ಕೇವಲ ಅವಕಾಶ ಮಾತ್ರವಲ್ಲ ಗೌರವವನ್ನೂ ನೀಡಲಾಗುತ್ತದೆ. ಪ್ರಮೋದಾದೇವಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ರಾಜವಂಶಸ್ಥರೊಂದಿಗೆ ಬೆಳಗಿನ ಉಪಹಾರ ಸೇವಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಭಾರತ-ದ.ಆಫ್ರಿಕಾ ಕ್ರಿಕೆಟ್ ಮ್ಯಾಚ್: ಬೆಂಗಳೂರಿನಲ್ಲಿ ರಸ್ತೆ ಸಂಚಾರ ಬದಲಾವಣೆ