ಮೈಸೂರು: ಹದಗೆಟ್ಟ ಈ ದೇಶದ ವ್ಯವಸ್ಥೆಯನ್ನು ಸರಿಪಡಿಸಲು ಯಾವೊಬ್ಬ ನಾಯಕನಿಂದಲೂ ಸಾಧ್ಯವಿಲ್ಲ. ಇದನ್ನು ಸರಿಪಡಿಸಲು ಜನರೇ ಮುಂದೆ ಬರಬೇಕೆಂದು ಬಹುಭಾಷಾ ನಟ ಪ್ರಕಾಶ್ ರಾಜ್ ಮೈಸೂರಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಹೇಳಿದರು.
ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಯಾತ್ರೆಯ ಮೂಲಕ ದೇಶ ಪ್ರೇಮ ತೋರಿಸಲು ಹೋಗುತ್ತಿರುವುದು ನಿಜವಾದ ದೇಶಪ್ರೇಮ ಅಲ್ಲ. ಇದಕ್ಕೆ ಬದಲು ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕು, ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು, ಬಡತನ ನಿರ್ಮೂಲನೆ ಮಾಡಬೇಕು, ಪಾಲಿಟಿನ್, ಸಿಂಥೆಟಿಕ್ ರಾಷ್ಟ್ರ ಧ್ವಜದ ಬದಲು ಖಾದಿ ರಾಷ್ಟ್ರ ಧ್ವಜಕ್ಕೆ ಉತ್ತೇಜನ ನೀಡಬೇಕು ಎಂದರು.
ಹಿಂದಿ ರಾಷ್ಟ್ರಭಾಷೆ ಅಲ್ಲ : ಹಿಂದಿ ರಾಷ್ಟ್ರಭಾಷೆ ಅಲ್ಲ ಎಂಬುದು ಹಿಂದೆಯೇ ನಮೂದಿಸಲಾಗಿದೆ. ಈಗ ಹಿಂದಿ ರಾಷ್ಟ್ರಭಾಷೆ ಎಂದು ಇದರ ಹಿಂದೆ ಯಾರೋ ಕತ್ತಿಯನ್ನು ಇಟ್ಟುಕೊಂಡು ಹೇಳಿಕೆ ನೀಡಿಸುತ್ತಿದ್ದಾರೆ. ಹಿಂದಿ ಭಾಷೆ ಅಷ್ಟೇ ರಾಷ್ಟ್ರಭಾಷೆ ಅಲ್ಲ ಎಂದು ಹೇಳಿದರು.
ನಾನು ಜಸ್ಟ್ ಆಸ್ಕಿಂಗ್ ಮೂಲಕ ಇಂದಿಗೂ ಸಹ ಆ್ಯಕ್ಟಿವ್ ಆಗಿದ್ದೇನೆ. ನಾನು ಆ್ಯಕ್ಟಿವ್ ಆಗಿಲ್ಲ ಎಂದರೆ ಸತ್ತೇ ಹೋದಂತೆ, ನಾನು ಯಾವತ್ತೂ ಪ್ರಗತಿಪರ ಚಿಂತಕರ ಪರವಾಗಿದ್ದೇನೆ. ನನ್ನ ಕೆಲಸಗಳನ್ನು ಮಾಧ್ಯಮದ ಮುಂದೆ ಹೇಳಬೇಕೆಂದೇನು ಇಲ್ಲ. ಕಣ್ಣಿಗೆ ಕಾಣದ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ಕೆಲಸಗಳ ಮಧ್ಯೆ ಸದಾ ಆ್ಯಕ್ಟಿವ್ ಆಗಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಧಾನ ಮಂತ್ರಿ ಮೈಸೂರಿಗೆ ಬಂದಾಗ ರಸ್ತೆಗಳನ್ನು ಮಾಡುತ್ತಾರೆ. ಆದರೆ, ನಮ್ಮ ಟ್ಯಾಕ್ಸ್ ದುಡ್ಡನ್ನು ನಮಗೆ ರಸ್ತೆ ಮಾಡಲು ಯಾಕೆ ಖರ್ಚು ಮಾಡುವುದಿಲ್ಲ ಎಂದು ಪ್ರಶ್ನಿಸಿದ ಪ್ರಕಾಶ್ ರಾಜ್, ಅಪ್ಪು ಹೆಸರಿನಲ್ಲಿ ಅಪ್ಪು ಎಕ್ಸ್ ಪ್ರೆಸ್ ಆಂಬ್ಯುಲೆನ್ಸ್ ಬಡವರ ಸೇವೆಗಾಗಿ ಮಾಡಿದ್ದೇನೆ ಎಂದರು.
ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದೆ. ಅದು ಸುದ್ದಿಯಾಯಿತು. ಆದರೆ, ಅದರಲ್ಲಿ ಅವರು ಸೋತರು, ಕ್ಷಮೆ ಕೇಳಿದರು. ಅದು ಸುದ್ದಿ ಆಗಲಿಲ್ಲ ಎಂದು ನಗುತ್ತಾ ಹೇಳಿದರು.
ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆ ಕೇವಲ ಗಾಸಿಪ್: ಕೆ.ಪಿ. ನಂಜುಂಡಿ