ಮೈಸೂರು: ಕಾರು ಅಪಘಾತದಲ್ಲಿ ಗಾಯಗೊಂಡು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ್ ಮೋದಿ ಹಾಗೂ ಕುಟುಂಬಸ್ಥರು ವಿಶೇಷ ವಿಮಾನದ ಮೂಲಕ ಇಂದು (ಬುಧವಾರ) ಅಹಮದಾಬಾದ್ಗೆ ಪ್ರಯಾಣ ಬೆಳೆಸಿದರು.
ಮಂಗಳವಾರ ಕಡಕೊಳದ ಬಳಿ ಕಾರು ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಪ್ರಹ್ಲಾದ್ ಮೋದಿ ಹಾಗೂ ಕುಟುಂಬದ ಮೂವರು ಗಾಯಗೊಂಡಿದ್ದು ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಬೆಳಗ್ಗೆ ಪ್ರಹ್ಲಾದ್ ಮೋದಿಯವರೇ ಪತ್ರಿಕಾಗೋಷ್ಠಿ ನಡೆಸಿ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದು ಹೇಳಿದ್ದರು.
ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದೆಂದು ವೈದ್ಯರು ಸಹ ಹೇಳಿಕೆ ನೀಡಿದ್ದರು. ಆದರೆ, ಈ ಮಧ್ಯೆ ತಾಯಿ ಹೀರಾಬೆನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದ ಸುದ್ದಿ ಕೇಳುತ್ತಿದ್ದಂತೆ ಅವರ ಆರೋಗ್ಯ ವಿಚಾರಿಸಲು ಮೈಸೂರಿನ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಅಹಮದಾಬಾದ್ಗೆ ತೆರಳಿದ್ದಾರೆ.
ಪ್ರಹ್ಲಾದ್ ಮೋದಿ ಹೇಳಿದ್ದೇನು?: ಅಹಮದಾಬಾದ್ಗೆ ಹೊರಡುವ ಮುನ್ನ ಆಸ್ಪತ್ರೆ ಬಳಿ ಮಾಧ್ಯಮದವರ ಜೊತೆಗೆ ಮಾತನಾಡಿದ ಪ್ರಹ್ಲಾದ್ ಮೋದಿ, ನನ್ನ ತಾಯಿಯ ಆರೋಗ್ಯ ಸ್ಥಿರವಾಗಿದೆ. ಒಂದೆರಡು ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಈಗ ಅಹಮದಾಬಾದ್ನತ್ತ ಹೊರಟಿದ್ದೇವೆ. ಅಲ್ಲಿಗೆ ಹೋದ ತಕ್ಷಣ ತಾಯಿಯ ಬಳಿ ತೆರಳಿ ಆರೋಗ್ಯ ವಿಚಾರಿಸುತ್ತೇವೆ. ಪ್ರಧಾನ ಮಂತ್ರಿಗಳು ಈಗಾಗಲೇ ಅಹಮದಾಬಾದ್ಗೆ ಬಂದು ತಾಯಿಯ ಆರೋಗ್ಯ ವಿಚಾರಿಸಿದ್ದಾರೆ ಎಂದರು.
ಕಾರು ಅಪಘಾತದಲ್ಲಿ ಗಾಯಗೊಂಡಿದ್ದೆ. ನಾವು ಇದೀಗ ಆರೋಗ್ಯವಾಗಿದ್ದೇವೆ. ವೈದ್ಯರ ಸಲಹೆ ಪಡೆದೇ ಅಹಮದಾಬಾದ್ಗೆ ತೆರಳುತ್ತಿದ್ದೇವೆ. ನಮ್ಮನ್ನು ಕುಟುಂಬದವರ ರೀತಿ ನೋಡಿಕೊಂಡ ಎಲ್ಲರಿಗೂ ಧನ್ಯವಾದ ಎಂದು ಹೇಳಿದರು.
ಉಪಸ್ಥಿತರಿದ್ದ ಸಚಿವ ಸೋಮಶೇಖರ್: ಪ್ರಹ್ಲಾದ್ ದಾಮೋದರ್ ಮೋದಿ ಹಾಗೂ ಕುಟುಂಬದವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪ್ರಹ್ಲಾದ್ ಮೋದಿ ಕುಟುಂಬದವರು ಅಹಮದಾಬಾದ್ಗೆ ತೆರಳಲು ಸಚಿವ ನಾರಾಯಣ ಗೌಡ ಮುಂಬೈನ ವಿಮಾನ ನಿಲ್ದಾಣದ ಅಧಿಕಾರಿಗಳ ಜೊತೆ ಮಾತನಾಡಿ ವಿಶೇಷ ವಿಮಾನದ ವ್ಯವಸ್ಥೆ ಮಾಡಿದರು ಎಂದು ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಗುಜರಾತ್: ಆಸ್ಪತ್ರೆಗೆ ದಾಖಲಾದ ಅಮ್ಮನ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ