ಮೈಸೂರು : ಲಾಕ್‌ಡೌನ್ ಸಂದರ್ಭದಲ್ಲಿ ಹೆಲ್ಮೆಟ್ ಇಲ್ಲದೆ ಸಂಚರಿಸಿದ ಬೈಕ್ ಸವಾರನನ್ನು ತಡೆದ ಪೊಲೀಸರು ಪ್ರಶ್ನೆ ಮಾಡಿದ್ದು, ಇದಕ್ಕೆ ಬೈಕ್ ಸವಾರ ಭಿನ್ನವಾಗಿ ಉತ್ತರಿಸಿ ದಂಡ ಹಾಕಿಸಿಕೊಂಡಿರುವ ಘಟನೆ ನಗರದ ಆರ್ಗೇಟ್ ಬಳಿ ನಡೆದಿದೆ.
ನಗರದಲ್ಲಿ ಲಾಕ್‌ಡೌನ್ ಜಾರಿಯಾಗಿದ್ದರೂ ಅನವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡುತ್ತಿದ್ದ ಬೈಕ್ ಸವಾರರನ್ನು ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಹೆಲ್ಮೆಟ್ ಇಲ್ಲದೆ ಬಂದ ಬೈಕ್ ಸವಾರನನ್ನು ಸಂಚಾರಿ ಎಸಿಪಿ ತಡೆದು, ಎಲ್ಲಿಗೆ ಹೋಗುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಪ್ರತಿಕ್ರಿಯಿಸಿರುವ ಬೈಕ್ ಸವಾರ, ನಾನು ಡಿಸಿ ಆಫೀಸ್ನಲ್ಲಿ ಡ್ರೈವರ್ ಕೆಲಸ ಮಾಡುತ್ತಿದ್ದೇನೆ ಎಂದು ಉತ್ತರ ಕೊಟ್ಟಿದ್ದಾನೆ.
ಇದರಿಂದ ಕೋಪಗೊಂಡ ಎಸಿಪಿ, ಹಾಗಾದ್ರೆ ಹೆಲ್ಮೆಟ್ ಎಲ್ಲಿ? ಎಂದು ಪುನಃ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ಬೈಕ್ ಸವಾರ, 'ಗಾಡಿಯಲ್ಲಿ ಇಟ್ಟಿದ್ದೇ ಸಾರ್, ಯಾರೋ ಕದ್ದಿದ್ದಾರೆ' ಎಂದಿದ್ದಾನೆ.
ಹೀಗೆ ಉತ್ತರಿಸುತ್ತಿದ್ದಂತೆ ಕೋಪಗೊಂಡ ಸಂಚಾರಿ ಎಸಿಪಿ, 1 ಲಕ್ಷದ 20 ಸಾವಿರ ರೂ. ಕೊಟ್ಟು ಬೈಕ್ ತೆಗೆದುಕೊಂಡಿದ್ದೀಯ. ಹೆಲ್ಮೆಟ್ ಕೇಳಿದರೆ ಏನೇನೋ ಹೇಳುತ್ತಿಯಾ? ಎಂದು ಸ್ಥಳದಲ್ಲಿಯೇ ದಂಡ ವಿಧಿಸಿದ್ದಾರೆ.
ಓದಿ: ರಾಜ್ಯದೆಲ್ಲೆಡೆ ಪೊಲೀಸರಿಂದ ಲಾಠಿ ಏಟು : ಗಂಗಾವತಿಯಲ್ಲಿ ಮಾತ್ರ 'ಹೂವಿನ ಗಿಫ್ಟ್'!!