ಮೈಸೂರು : ನಗರದ ಬಂಬೂ ಬಜಾರ್ ರಸ್ತೆಯಲ್ಲಿ ಹೊತ್ತು ಮೀರಿದರೂ ಹೋಟೆಲ್ ಮುಚ್ಚಿಲ್ಲವೆಂದು ಬೀಟ್ ಪೊಲೀಸರು ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಘಟನೆಯನ್ನು ಖಂಡಿಸಿದೆ. ಪೊಲೀಸರು ಹೋಟೆಲ್ ಸಿಬ್ಬಂದಿ ಹಾಗೂ ಮಾಲೀಕರನ್ನು ಠಾಣೆಗೆ ಕರೆದುಕೊಂಡು ಹೋಗಿ ರಾಜಿ ಸಂಧಾನ ನಡೆಸಿ ಪ್ರಕರಣ ಮುಕ್ತಾಯಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ರಾತ್ರಿ ಸುಮಾರು 10:45 ಸುಮಾರಿಗೆ ಬಂಬೂ ಬಜಾರ್ ರಸ್ತೆಯಲ್ಲಿರುವ ಹೋಟೆಲೊಂದಕ್ಕೆ ಆಗಮಿಸಿದ ಪೊಲೀಸರು, ತಡವಾದರೂ ಯಾಕೆ ಹೋಟೆಲ್ ಮುಚ್ಚಿಲ್ಲ ಎಂದು ಪ್ರಶ್ನಿಸಿದ್ದಾರೆ. ಬಳಿಕ ಹೋಟೆಲ್ ಸಿಬ್ಬಂದಿಯನ್ನು ಕರೆದು ಹೋಟೆಲ್ ಮುಚ್ಚುವಂತೆ ತಾಕೀತು ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ. ಬಳಿಕ ಪೊಲೀಸರು ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ದೃಶ್ಯ ಹೋಟೆಲ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಾಜಿ ಸಂಧಾನ: ಮೇಲಾಧಿಕಾರಿಗಳ ಸೂಚನೆಯಂತೆ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ರಾತ್ರಿಯೇ ಬಗೆಹರಿಸಲಾಯಿತು ಎಂದು ಹೋಟೆಲ್ ಮಾಲೀಕ ಜಾವೇದ್ ತಿಳಿಸಿದರು.
ಇದನ್ನೂ ಓದಿ : ನಂಬಿಸಿ ಗರ್ಭಿಣಿಯನ್ನಾಗಿಸಿದ ಆರೋಪ: ಅತ್ತೆ ಮಗನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ
ವಿಡಿಯೋ ಹಂಚಿಕೊಂಡ ಹೋಟೆಲ್ ಮಾಲೀಕರ ಸಂಘ : ಪೊಲೀಸರು ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದನ್ನು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಖಂಡಿಸಿದ್ದಾರೆ. ಪೊಲೀಸರು ಹಲ್ಲೆ ನಡೆಸಿರುವ ಸಿಸಿಟಿವಿ ಹಾಗೂ ಮೊಬೈಲ್ನಲ್ಲಿ ಸೆರೆ ಹಿಡಿದಿರುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಮೊದಲೇ ಕೋವಿಡ್ ಬಳಿಕ ಹೋಟೆಲ್ ನಡೆಸುವುದು ಕಷ್ಟವಾಗಿದೆ. ಇದರ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಪೊಲೀಸರ ದಬ್ಬಾಳಿಕೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾತ್ರಿ 10 ಗಂಟೆಯ ನಂತರ ಹೋಟೆಲ್ ಮುಚ್ಚುವಂತೆ ಬೀಟ್‌ನಲ್ಲಿರುವ ಗರುಡ ಪೊಲೀಸರು ಹೋಟೆಲ್‌ನವರಿಗೆ ಪ್ರತಿದಿನ ಎಚ್ಚರಿಕೆ ನೀಡುವುದು ಸಾಮಾನ್ಯ. ಆದರೆ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ನಗರದಲ್ಲಿ ರಾತ್ರಿ 11 ಗಂಟೆಯವರೆಗೆ ಹೋಟೆಲ್ ತೆರೆಯಲು ಅವಕಾಶ ನೀಡಬೇಕು. ಇದರಿಂದ ಪ್ರವಾಸಿಗರಿಗೂ ಅನುಕೂಲ ಆಗುತ್ತದೆ ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : Bengaluru crime: ಜ್ಯೂಸ್, ನೀರಿನಲ್ಲಿ ಬೆರೆಸಿ ಕುಡಿದರೆ ನಶೆ.. ಬೆಂಗಳೂರಿನಲ್ಲಿ ಹೊಸ ಡ್ರಗ್ಸ್ ಜಾಲ ಭೇದಿಸಿದ ಪೊಲೀಸರು