ಮೈಸೂರು : ಕೆಆರ್ ಆಸ್ಪತ್ರೆಯ ವಾರ್ಡ್ಗಳಲ್ಲಿ ನೀರಿಲ್ಲ, ಸ್ವಚ್ಚತೆಯಿಲ್ಲ. ರೋಗಿಗಳಿಗೆ ಕಷ್ಟವಾಗಿದೆ ಎಂದು ಜಿಲ್ಲಾಧಿಕಾರಿಗಳನ್ನು ತಡೆದು ಜನರು ಸಮಸ್ಯೆ ಹೇಳಿದ್ದು ಅವರ ಸಮಸ್ಯೆಗೆ ಜಿಲ್ಲಾಧಿಕಾರಿ ಸಮಾಧಾನದಿಂದ ಉತ್ತರ ನೀಡಿದರು.
ಬ್ಲ್ಯಾಕ್ ಫಂಗಸ್ ರೋಗಿಗಳ ವಾರ್ಡ್‌ನ ಪರಿಶೀಲನೆ ಮಾಡಿ ಕೆ.ಆರ್ ಆಸ್ಪತ್ರೆಯ ಕಚೇರಿಯಲ್ಲಿ ಅಧಿಕಾರಿಗಳ ಮತ್ತು ಡಾಕ್ಟರ್ಗಳ ಸಭೆಯನ್ನು ನಡೆಸಲು ಹೋಗುವ ಸಂದರ್ಭದಲ್ಲಿ ವಾರ್ಡ್‌ನ ಮುಂಭಾಗದಲ್ಲಿ ಇದ್ದ ರೋಗಿಗಳ ಸಂಬಂಧಿಕರು ಸಮಸ್ಯೆ ಹೇಳಿಕೊಂಡರು.
ಈ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ಗಳು ತುಂಬ ತೊಂದರೆ ಕೊಡುತ್ತಾರೆ. ದುಡ್ಡು ಕೊಟ್ಟರೆ ಮಾತ್ರ ರೋಗಿಗಳನ್ನು ನೋಡಲು ಬಿಡುತ್ತಾರೆ. ವಾರ್ಡ್‌ನ ಒಳಗಡೆ ಶುಚಿತ್ವ ಇಲ್ಲ, ನೀರು ಸರಿಯಾಗಿ ಬರುವುದಿಲ್ಲ.
ಡಾಕ್ಟರ್ಗಳು ಪ್ರತಿ ಔಷಧಿಗಳನ್ನು ತರಲು ಹೊರಗೆ ಚೀಟಿ ಬರೆದು ಕೊಡುತ್ತಾರೆ. ತಂದ ಔಷಧಿಗಳನ್ನು ಸರಿಯಾಗಿ ಹಾಕುವುದಿಲ್ಲ. ರೋಗಿಗಳನ್ನು ನೋಡಲು ಲಂಚ ಕೊಡಬೇಕು ಎಂದು ತಮಗಾದ ನೋವನ್ನು ಜನರು ಜಿಲ್ಲಾಧಿಕಾರಿಗಳ ಮುಂದೆ ಹೇಳಿಕೊಂಡರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಈ ಸಂಬಂಧ ದೂರು ( HELP DESK) ಪೆಟ್ಟಿಗೆಯನ್ನು ತೆರೆಯುವಂತೆ ಸೂಚಿಸಿದ್ದು, ಪ್ರತಿದಿನ ನಾನೇ ಖುದ್ದಾಗಿ ನೋಡುತ್ತೇನೆ ಎಂದು ಜನರನ್ನು ಸಮಾಧಾನ ಪಡಿಸಿದರು.