ಮೈಸೂರು: ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಅತಿಥಿಗೃಹದ ಕೊಠಡಿಗಳನ್ನು ಬಾಡಿಗೆಗೆ ಪಡೆದು ಮೋಜು ಮಸ್ತಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತಿಹಾಸ ಪ್ರಸಿದ್ಧ ದೇವಾಲಯವಾದ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಾದ ಅತಿಥಿ ಗೃಹದಲ್ಲಿ ಗುಂಡು ಪಾರ್ಟಿ ಮಾಡಿ, ಧಾರ್ಮಿಕ ಸ್ಥಳವನ್ನು ಮೋಜು ಮಸ್ತಿಗಾಗಿ ಬಳಸಿಕೊಂಡಿದ್ದಾರೆ ಎಂದು ನಗರಸಭಾ ಸದಸ್ಯ ಕಪಿಲೇಶ್ ತಮ್ಮ ಫೇಸ್ಬುಕ್ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನೂ ಈ ಕುರಿತು ವಿಚಾರಿಸಿದಾಗ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್ ಅವರು ವಿಐಪಿ ಕೊಠಡಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಆರೋಪವಾಗಿದೆ. ತಾಲೂಕು ಪಂಚಾಯಿತಿಯ ಚುನಾಯಿತ ಜನಪ್ರತಿನಿಧಿಯೊಬ್ಬರು ಕೊಠಡಿ ಬಾಡಿಗೆ ಪಡೆದು ಸಭೆ ನಡೆಸಿದ್ದಾರೆ. ಇದನ್ನೇ ಪಾರ್ಟಿ ಎಂದು ತಪ್ಪಾಗಿ ಬಿಂಬಿಸಿ ವದಂತಿ ಹಬ್ಬಿಸಲಾಗಿದೆ ಎಂದು ಹೇಳಿದರು.