ಮೈಸೂರು: ಕೊರೊನಾ 3ನೇ ಅಲೆ ಆತಂಕದಿಂದ ಎಚ್ಚೆತ್ತು ಮಕ್ಕಳ ಮೇಲೆ ಬೀರಲಿರುವ ಪರಿಣಾಮ ನಿಯಂತ್ರಿಸಲು ಮೈಸೂರು ಮಹಾನಗರ ಪಾಲಿಕೆ ಪೀಡಿಯಾಟ್ರಿಕ್ ಕೋವಿಡ್ ಕೇರ್ ಆರಂಭಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್, ಪರಿಸ್ಥಿತಿ ಕೈ ಮೀರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 150 ಮಕ್ಕಳ ತಜ್ಞರು ಇದ್ದಾರೆ. ಜೊತೆಗೆ ಮಕ್ಕಳಿಗೆ ಬೇಕಾದ ಐಸಿಯು, ಉಪಕರಣಗಳು ಎಷ್ಟಿವೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ದೊಡ್ಡವರಿಗೆ ನೀಡುವಂತೆ ಮಾತ್ರೆಗಳನ್ನು ಮಕ್ಕಳಿಗೆ ನೀಡಲು ಸಾಧ್ಯವಿಲ್ಲ ಎಂದರು.
ಪೀಡಿಯಾಟ್ರಿಕ್ ಮೆಡಿಕಲ್ ಕಿಟ್ ತಯಾರು ಮಾಡಲು ಸಿದ್ಧತೆ ಮಾಡಕೊಳ್ಳಲಾಗುತ್ತಿದೆ. ಸದ್ಯ ಮೈಸೂರಿನಲ್ಲಿ ದಿನಕ್ಕೆ ನಾಲೈದು ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವ ಕಾರಣ ಅವರಿಗೆ ಸೋಂಕು ತಗುಲಿದರೂ ಅಪಾಯದ ಮಟ್ಟ ತಲುಪಿಲ್ಲ. ಹೀಗಂತ ಮುಂಜಾಗ್ರತೆ ತೆಗೆದುಕೊಳ್ಳದೆ ಇರುವಂತಿಲ್ಲ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.