ಮೈಸೂರು : ಕಾಡು ಪ್ರಾಣಿಗಳ ಬೇಟೆಗಾಗಿ ಪೇಪರ್ನಲ್ಲಿ ಸುತ್ತಿ ಇಡಲಾಗಿದ್ದ ಸಿಡಿಮದ್ದನ್ನು ಎತ್ತೊಂದು ತಿಂದಿದೆ. ಪರಿಣಾಮ ಅದರ ಬಾಯಿ ಛಿದ್ರಗೊಂಡು ಸಾವನ್ನಪ್ಪಿದ ಘಟನೆ ನಂಜನಗೂಡು ತಾಲೂಕಿನ ಈರೇಗೌಡನ ಹುಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹದೇವಯ್ಯ ಎಂಬುವರ ಕೃಷಿ ಜಮೀನಿನಲ್ಲಿ ಘಟನೆ ನಡೆದಿದೆ. ಕಾಡು ಹಂದಿ ಸೇರಿದಂತೆ ವಿವಿಧ ಪ್ರಾಣಿಗಳ ಬಲಿಗಾಗಿ ಕೃಷಿ ಜಮೀನಿನಲ್ಲಿ ಕಿಡಿಗೇಡಿಗಳು ಸಿಡಿಮದ್ದನ್ನು ಬಚ್ಚಿಟ್ಟಿದ್ದರು. ತಿನ್ನುವ ಪದಾರ್ಥ ಇರಬಹುದು ಎಂದು ಎತ್ತು ಬಾಯಿ ಹಾಕಿದಾಗ ಸಿಡಿಮದ್ದು ಸ್ಪೋಟಗೊಂಡು ಬಾಯಿ ಛಿದ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದೆ.
ಘಟನಾ ಸ್ಥಳಕ್ಕೆ ಮೈಸೂರಿನ ಉಪ ಪೊಲೀಸ್ ವರಿಷ್ಠಾಧಿಕಾರಿ ಬಾಬು, ನಂಜನಗೂಡು ಡಿವೈಎಸ್ಪಿ ಗೋವಿಂದರಾಜು, ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಕರಕಿಕಟ್ಟಿ, ದೊಡ್ಡಯ್ಯ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಶ್ವಾನದಳದ ಮೂಲಕ ಸ್ಥಳ ಪರಿಶೀಲನೆ ಮಾಡಿ, ಕಿಡಿಗೇಡಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.
ಮಕ್ಕಳ ಕೈಗೆ ಸಿಕ್ಕ ಹಂದಿ ಬೇಟೆಗೆ ಬಳಸುವ ಸಿಡಿ ಮದ್ದಿನ ಉಂಡೆ (ಪ್ರತ್ಯೇಕ ಸುದ್ದಿ) : ಹಂದಿ ಬೇಟೆಗೆ ಬಳಸುವ ಸಿಡಿ ಮದ್ದಿನ ಉಂಡೆ ಮಕ್ಕಳ ಕೈಗೆ ಸಿಕ್ಕಿದ್ದು, ಭಾರಿ ಅನಾಹುತ ತಪ್ಪಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯನಕನಹಳ್ಳಿ ತಾಲೂಕಿನ ಮಾದೇನಹಳ್ಳಿಯಲ್ಲಿ (ಜನವರಿ- 5-24) ನಡೆದಿತ್ತು. ಶಾಲೆ ಪಕ್ಕದಲ್ಲೇ ಎಸೆದಿದ್ದ ಸಿಡಿಮದ್ದಿನ ಉಂಡೆಯನ್ನು ಬಾಲ್ ಅಂತ ಭಾವಿಸಿದ್ದ ಬಾಲಕರಿಬ್ಬರು, ಅದನ್ನು ತಮ್ಮ ಬಳಿ ಇಟ್ಟುಕೊಂಡು ಓಡಾಡಿದ್ದರು. ಯುವರಾಜ ಹಾಗೂ ಶ್ರೀನಿವಾಸ್ ಎಂಬ ಬಾಲಕರಿಗೆ ಸಿಕ್ಕ ವಸ್ತು ಸ್ಪೋಟಕವೆಂದು ಅವರಿಗೆ ಗೊತ್ತಾಗಿಲ್ಲ. ಯುವರಾಜ ನೀಡಿದ್ದ ಆ ಸ್ಪೋಟಕ ಉಂಡೆಯನ್ನು ಶ್ರೀನಿವಾಸ್ ತನ್ನ ತಂದೆಗೆ ನೀಡಿದ್ದ.
ಯಾವುದೋ ವಾಮಾಚಾರದ ಬಾಲ್ ಇರಬೇಕೆಂದು ಭಾವಿಸಿದ ಶ್ರೀನಿವಾಸ್ ತಂದೆ ಅದನ್ನು ದೂರಕ್ಕೆ ಎಸೆದಿದ್ದರು. ಎಸೆದ ಉಂಡೆಯನ್ನು ಅಲ್ಲಿಯೇ ಇದ್ದ ಬೀದಿನಾಯಿ ಕಚ್ಚಿತ್ತು. ನಾಯಿ ಕಚ್ಚುತ್ತಿದ್ದಂತೆ ಮದ್ದಿನ ಉಂಡೆ ಸ್ಫೋಟಗೊಂಡಿತ್ತು. ಬಾಯಿ ಛಿದ್ರಗೊಂಡ ಪರಿಣಾಮ ನಾಯಿ ಸ್ಥಳದಲ್ಲೇ ಪ್ರಾಣ ಬಿಟ್ಟಿತ್ತು. ಅದೃಷ್ಟವಶಾತ್ ಬಾಲಕರು ಅಪಾಯದಿಂದ ಪಾರಾಗಿದ್ದರು. ಸ್ಫೋಟಗೊಂಡಿರುವುದು ಹಂದಿ ಬೇಟೆಯಾಡಲು ಬಳಸುವ ಮದ್ದಿನ ಉಂಡೆಯಾಗಿದೆ ಎಂಬುದು ಖಚಿತವಾಗಿತ್ತು.
ಸಿಡಿಮದ್ದು ತಿಂದು ಕಾಡುಹಂದಿ ಸಾವು (ಪ್ರತ್ಯೇಕ ಸುದ್ದಿ) : ಬೇಟೆಗಾರರು ಇಟ್ಟಿದ್ದ ಸಿಡಿಮದ್ದಿನ ಉಂಡೆತಿಂದು ಕಾಡುಹಂದಿಯೊಂದು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದಲ್ಲಿ (ಜೂನ್- 30-21) ನಡೆದಿತ್ತು.
ಇದನ್ನೂ ಓದಿ: ಮೈಸೂರು: ಸಿಡಿಮದ್ದು ತಿಂದು ಕಾಡುಹಂದಿ ಸಾವು