ಮೈಸೂರು: ಕೋವಿಡ್ ಹೀಗೆಯೇ ಕಡಿಮೆಯಾದರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶಾಲೆಯನ್ನು ಆರಂಭಿಸಬಹುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೋವಿಡ್ ಎರಡನೇ ಹಂತದ ಅಲೆ ಬರದಿದ್ದರೆ ಮಾಸ್ಕ್ ಹಾಗೂ ಇತರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶಾಲಾ-ಕಾಲೇಜುಗಳನ್ನು ಆರಂಭ ಮಾಡಲಿ. ಕಾಲಾವಕಾಶ ಕಡಿಮೆ ಇರುವುದರಿಂದ ಪಠ್ಯ ಕ್ರಮಗಳನ್ನು ಕಡಿಮೆ ಮಾಡಲು ಚಿಂತನೆ ನಡೆಸುತ್ತಿದ್ದಾರೆ ಎಂದರು.
ಮುಂದಿನ ಚುನಾವಣೆಯಲ್ಲಿ ನಾನು ಚಾಮುಂಡೇಶ್ವರಿ ಕ್ಷೇತ್ರ ಅಥವಾ ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಇನ್ನೂ ಚಿಂತಿಸಿಲ್ಲ. ಈ ಬಗ್ಗೆ 6 ತಿಂಗಳಲ್ಲಿ ತೀರ್ಮಾನ ಮಾಡುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಬಳಿಕ ನಾನು ಕ್ಷೇತ್ರಕ್ಕೆ ಹೋಗಿಲ್ಲ ಎಂಬುದು ಸತ್ಯ. ಇವತ್ತು ಕ್ಷೇತ್ರದ ಮುಖಂಡರ ಸಭೆ ಕರೆದಿದ್ದು, ನಾನು ಹೋಗುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸ್ಥಳೀಯ ಜನರು ಪರ್ಯಾಯ ನಾಯಕತ್ವ ಕೇಳಿರುವುದು ಒಳ್ಳೆಯ ಬೆಳವಣಿಗೆ. ನಾನು ಕೊನೆಯ ತನಕ ಇರಲು ಸಾಧ್ಯವಿಲ್ಲ, ಯಾರಾದರೂ ಪರ್ಯಾಯ ನಾಯಕರು ಬೇಕಲ್ಲವೇ ಎಂದರು.
ಓದಿ: ಎಲ್ಲಿ ಶಕ್ತಿ ಇರುತ್ತೋ ಅಲ್ಲಿಗೆ ಜನ ಹೋಗ್ತಾರೆ: ಡಿ.ಕೆ. ಶಿವಕುಮಾರ್
ಇನ್ನು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ಎಲ್ಲೂ ಹೋಗಲ್ಲ. ಈಗ ಕಾಂಗ್ರೆಸ್ನ ಪರಿಷತ್ ಸದಸ್ಯ ಆಗಿದ್ದು, ಜೆಡಿಎಸ್ ಸೇರುವುದಿಲ್ಲ ಎಂದು ಹೇಳಿದರು. ವಿಧಾನ ಪರಿಷತ್ನಲ್ಲಿ ನಡೆದ ಗಲಾಟೆ ಬಗ್ಗೆ ಪರಿಷತ್ ಕಾರ್ಯದರ್ಶಿಯ ಬಗ್ಗೆ ಸಭಾಪತಿಯಿಂದ ನೊಟೀಸ್ ಜಾರಿ ಮಾಡಿರುವುದು ಸರಿಯಿದೆ ಎಂದರು.