ಮೈಸೂರು: ಹುಣಸೂರು ತಾಲೂಕಿನಲ್ಲಿ ಇಂದು ನಡೆಯಲಿರುವ ಹನುಮ ಜಯಂತಿಯ ಭದ್ರತೆಗಾಗಿ 1,800 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.
ಎಸ್ಪಿ ಸೀಮಾ ಲಾಟ್ಕರ್ ನೇತೃತ್ವದಲ್ಲಿ 3 ASP, 10 DySP, 32 ಇನ್ಸ್ಪೆಕ್ಟರ್, 88 SI ಗಳು, 157 ASI, 1100 ಪೊಲೀಸರು, 10 KSRP ಮತ್ತು 6 DAR ತುಕಡಿಗಳು, 2 ತುಕಡಿ ಕ್ಷಿಪ್ರಕಾರ್ಯಪಡೆ, 2 ಆಂಟಿ ಬಾಂಬ್‌ಸ್ಕ್ವಾಡ್ ನಿಯೋಜನೆ ಮಾಡಲಾಗಿದೆ. ಅಲ್ಲದೇ, ಮೆರವಣಿಗೆ ವಿಡಿಯೋ ಚಿತ್ರೀಕರಣಕ್ಕೆ ತಂಡ ನಿಯೋಜನೆ ಮಾಡಲಾಗಿದೆ.
ಮೆರವಣಿಗೆಯಲ್ಲಿ ಮೂರು ಬೃಹತ್ ಆಂಜನೇಯಸ್ವಾಮಿ ವಿಗ್ರಹ, ಓಂ, ದತ್ತಾತ್ರೇಯ, ಶ್ರೀ ರಾಮಲಕ್ಷ್ಮಣ ವಿಗ್ರಹ, ಆಂಜನೇಯ ಗದೆ ಸೇರಿದಂತೆ ಒಟ್ಟು 12 ಸ್ಥಬ್ದಚಿತ್ರಗಳು ಈ ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಕಲ್ಕುಣಿಕೆ, ಸೇತುವೆ, ಸಂವಿಧಾನ ಸರ್ಕಲ್, ಬಸ್ ನಿಲ್ದಾಣದ ಮುಖ್ಯ ರಸ್ತೆ, ಕಲ್ಪತರು ವೃತ್ತ, ಅಕ್ಷಯ ಭಂಡಾರ್, ಬಜಾರ್ ರಸ್ತೆ, ಜೆ.ಎಲ್.ಬಿ.ರಸ್ತೆ, ಎಸ್.ಜೆ ರಸ್ತೆಗಳ ಮೂಲಕ ಮೆರವಣಿಗೆ ಸಾಗಲಿದೆ. ಈ ಮೆರವಣಿಗೆಯಲ್ಲಿ ಸಾವಿರಾರು ಹನುಮ ಭಕ್ತರು ಭಾಗಿಯಾಗಲಿದ್ದಾರೆ.
ಹನುಮಜಯಂತಿ ಮೆರವಣಿಗೆಗೆ ಕ್ಷಣಗಣನೆ: ಮೈಸೂರು ಜನರು ಮೆರವಣಿಗೆಗೆ ಕಾತರದಿಂದ ಕಾಯುತ್ತಿದ್ದು, ಹುಣಸೂರು ನಗರ ಕೇಸರಿಮಯವಾಗಿದೆ. ಬೃಹತ್ ಆಂಜನೇಯ ಉತ್ಸವ ಮೂರ್ತಿ ಹಾಗೂ ಹನುಮನ ಗದೆ ರೆಡಿಯಾಗಿದ್ದು, ಮುನೇಶ್ವರಕಾವಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಿ ಬೆಳಗ್ಗೆ 11ಕ್ಕೆ ರಂಗನಾಥ ಬಡಾವಣೆಯಿಂದ ಮೆರವಣಿಗೆ ಆರಂಭವಾಗಲಿದೆ.
ಸಾಂಬ ಸದಾಶಿವ ಸ್ವಾಮೀಜಿ, ನಟರಾಜ ಸ್ವಾಮೀಜಿ ಹಾಗೂ ಎಂಎಲ್ಸಿ ಹೆಚ್. ವಿಶ್ವನಾಥ್, ಶಾಸಕ ಜಿ.ಡಿ. ಹರೀಶ್‌ಗೌಡ, ಸಂಸದ ಪ್ರತಾಪ ಸಿಂಹ, ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಮೆರವಣಿಗೆ ಚಾಲನೆ ನೀಡಲಿದ್ದಾರೆ.
ಹುಣಸೂರಿನಲ್ಲಿ ಪೊಲೀಸ್ ವಾಹನಗಳಿಂದ ಪರೇಡ್ : ಅದ್ಧೂರಿಯಾಗಿ ಹನುಮ ಜಯಂತಿ ನಡೆಯಲಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅವರು, ಸೋಮವಾರ ಸಂಜೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಭೆ ನಂತರ ಹನುಮ ಜಯಂತಿ ಮೆರವಣಿಗೆಗೆ ಸಾಗುವ ರಸ್ತೆ ಉದ್ದಕ್ಕೂ, ಪೊಲೀಸ್ ವಾಹನಗಳು ಪರೇಡ್ ನಡೆಸಿ ಜನರಿಗೆ ಅಭಯ ನೀಡಿವೆ.
ಯಾವುದೇ ಅಹಿತರ ಘಟನೆಗಳು ನಡೆಯದಂತೆ ಹಾಗೂ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮೂಸೂರಿನ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರ ಮುನ್ನೆಚ್ಚರಿಕೆಯಾಗಿ ಈ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಂಡಿದೆ.
ಇದನ್ನೂ ಓದಿ: ಕಾಫಿ ನಾಡಲ್ಲಿ ದತ್ತ ಜಯಂತಿ ಉತ್ಸವ, ಅದ್ಧೂರಿ ಶೋಭಾಯಾತ್ರೆ