ಮೈಸೂರು: ಜಂಬೂಸವಾರಿ ವೇಳೆ ಚಿನ್ನದ ಅಂಬಾರಿಯಲ್ಲಿ ಆಸಿನರಾಗುವ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಅಲಂಕರಿಸುವ ಸೀರೆಯನ್ನು ಯಾರಿಂದಲೂ ಹರಕೆಯ ರೂಪದಲ್ಲಿ ಪಡೆಯದಿರುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಆದೇಶ ಮಾಡಿದ್ದಾರೆ.
ಪ್ರತೀ ವರ್ಷ ಜಂಬೂಸವಾರಿಯ ವೇಳೆಯಲ್ಲಿ ಚಿನ್ನದ ಅಂಬಾರಿಯಲ್ಲಿ ಕುಳಿತುಕೊಳ್ಳುವ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಗೆ ಪ್ರತಿ ಬಾರಿ ಹರಕೆಯ ರೂಪದಲ್ಲಿ ಭಕ್ತರು ಸೀರೆ ನೀಡುತ್ತಿದ್ದರು. ಇದರಿಂದ ಎರಡೆರಡು ಸೀರೆಗಳನ್ನು ಬದಲು ಮಾಡಲು ಒತ್ತಡ ಬರುತ್ತಿತ್ತು. ಇದರ ಬಗ್ಗೆ ಇತಿಹಾಸ ತಜ್ಞ ಪ್ರೊ. ಪಿ.ವಿ ನಂಜರಾಜ ಅರಸ್ ಹಾಗೂ ಮಾಜಿ ಎಂ ಎಲ್ ಸಿ ಮಾದೇಗೌಡರು ಉಸ್ತುವಾರಿ ಸಚಿವರಿಗೆ ಜಿಲ್ಲಾಡಳಿತದ ವತಿಯಿಂದ ಒಂದು ಸೀರೆಯನ್ನು ಕೊಡಬೇಕು ಹಾಗೂ ಅದೇ ಸೀರೆಯನ್ನು ಜಂಬೂಸವಾರಿಯ ವೇಳೆ ಚಾಮುಂಡೇಶ್ವರಿ ತಾಯಿಗೆ ಅಲಂಕರಿಸುವಂತೆ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದರು.
ಈ ಮನವಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದು, ಜಂಬೂಸವಾರಿ ದಿನದಂದು ಚಾಮುಂಡೇಶ್ವರಿಗೆ ಜಿಲ್ಲಾಡಳಿತದ ವತಿಯಿಂದಲೇ ರೇಷ್ಮೆ ಸೀರೆಯನ್ನು ನೀಡಿ ಅದನ್ನೇ ಅಲಂಕರಿಸುವಂತೆ ಸಚಿವರು ಆದೇಶಿಸಿದರು.
ವಿವಾದದ ಹಿನ್ನೆಲೆ: ಕಳೆದ 15 ವರ್ಷಗಳಿಂದ ಬೆಂಗಳೂರಿನ ಬಳೆಪೇಟೆಯ ವ್ಯಕ್ತಿಯೊಬ್ಬರು ಜಂಬೂಸವಾರಿಯ ದಿನ ಚಾಮುಂಡೇಶ್ವರಿ ತಾಯಿಗೆ ಅಲಂಕರಿಸುವ ಸೀರೆಯನ್ನು ಕೊಡುತ್ತಾ ಬಂದಿದ್ದರು. ಆದರೆ, ಕಳೆದ 2 ವರ್ಷಗಳ ಹಿಂದೆ ಅಂದು ಮುಖ್ಯಮಂತ್ರಿಯಾಗಿದ್ದವರ ಪತ್ನಿ ನೀಡಿದ ಸೀರೆಯನ್ನು ಜಂಬೂಸವಾರಿಯ ದಿನ ಅಲಂಕರಿಸುವಂತೆ ಒತ್ತಡ ಹೇಲಾಗಿತ್ತಂತೆ, ಈ ಹಿನ್ನೆಲೆಯಲ್ಲಿ ಎರಡೆರಡು ಸೀರೆಯನ್ನು ಜಂಬೂಸವಾರಿ ದಿನ ಚಾಮುಂಡೇಶ್ವರಿಗೆ ಅಲಂಕರಿಸಲಾಗಿದ್ದು, ಇದು ವಿವಾದಕ್ಕೆ ಕಾರಣವಾಗಿತ್ತು, ಇದರಿಂದ ಈ ಬಾರಿ ಯಾವುದೇ ಭಕ್ತರಿಂದ ರೇಷ್ಮೆ ಸೀರೆಯನ್ನು ಪಡೆಯದಂತೆ ಹಾಗೂ ಆ ಸೀರೆಯನ್ನು ಜಿಲ್ಲಾಡಳಿತದಿಂದಲೇ ನೀಡಲು ತೀರ್ಮಾನಿಸಲಾಗಿದೆ.