ಮೈಸೂರು: ಹಳೇ ಮೈಸೂರು ಭಾಗ ಕರ್ನಾಟಕದ ರಾಜಕಾರಣದಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಬಹುತೇಕ ರಾಜ್ಯದ ಗದ್ದುಗೆ ಹಿಡಿದವರು ಈ ಭಾಗದಿಂದ ಆಯ್ಕೆಯಾದವರು ಎಂಬುದು ಗಮನಾರ್ಹವಾದ ಸಂಗತಿ. ಈ ಭಾಗದಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಇಲ್ಲಿಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದು, ಈ ಭಾಗದ ವೈಶಿಷ್ಟ್ಯ ಎಂದು ಹೇಳಬಹುದು.
ರಾಜಕೀಯ ಪರಿಜ್ಞಾನ: ಸ್ವಾತಂತ್ರ್ಯದ ಬಳಿಕ ಈ ಭಾಗ ಸೇರಿದಂತೆ ಮೈಸೂರು ರಾಜ್ಯ ಎಂದು ಗುರುತಿಸಿಕೊಂಡಿತ್ತು. ಇಲ್ಲಿ ಮೈಸೂರು ಮಹಾರಾಜರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಅಡಿಪಾಯ ಹಾಕಿಕೊಟ್ಟರು. ಜೊತೆಗೆ ರಾಜ್ಯದ ಏಕೀಕರಣದ ಮೊದಲು, ರಾಜ್ಯದ ವ್ಯವಸ್ಥೆ ಮೈಸೂರು ಸಂಸ್ಥಾನದಲ್ಲಿ ಜಾರಿಯಲ್ಲಿತ್ತು. ಸ್ವಾತಂತ್ರ್ಯ ಪೂರ್ವದಲ್ಲೇ ರಾಜಕೀಯ ಪರಿಜ್ಞಾನ ಹಾಗೂ ತಿಳಿವಳಿಕೆ ಈ ಭಾಗದ ಜನರು ಹಾಗೂ ನಾಯಕರಲ್ಲಿ ಮೂಡಿತ್ತು. ಏಕೀಕರಣಗೊಂಡ ಕರ್ನಾಟಕದಲ್ಲಿ ಮೈಸೂರು ಭಾಗ ತನ್ನದೇ ಆದ ಇತಿಹಾಸ ಹೊಂದಿದ್ದು, ಇಲ್ಲಿಂದ ಆಯ್ಕೆಯಾದ ಜನಪ್ರತಿನಿಧಿಗಳು ಕರ್ನಾಟಕದ ಚುಕ್ಕಾಣಿ ಹಿಡಿದಿದ್ದಾರೆ ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.
ಹಳೇ ಮೈಸೂರು ಭಾಗದ ಜಿಲ್ಲೆಗಳು: ಸಾಮಾನ್ಯವಾಗಿ ಬೆಂಗಳೂರು ನಗರ ಹೊರತುಪಡಿಸಿ ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ, ಮೈಸೂರು, ಕೊಡಗು, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಸೇರಿದಂತೆ 10 ಜಿಲ್ಲೆಗಳನ್ನು ಹಳೆ ಮೈಸೂರು ಭಾಗದ ಜಿಲ್ಲೆಗಳು ಎಂದು ಗುರುತಿಸಲಾಗುತ್ತದೆ. ಈ ಭಾಗದಲ್ಲಿ 60ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಕಳೆದ 50 ವರ್ಷಗಳ ರಾಜಕೀಯ ಇತಿಹಾಸವನ್ನು ನೋಡಿದಾಗ ರಾಷ್ಟ್ರಮಟ್ಟದಲ್ಲಿ ಪ್ರಧಾನಿ ಹುದ್ದೆ ಏರಿದ ಹೆಚ್. ಡಿ. ದೇವೇಗೌಡರು ಹಾಸನ ಜಿಲ್ಲೆಯವರು, ಇನ್ನು ರಾಜ್ಯವನ್ನು ಮಾಹಿತಿ ತಂತ್ರಜ್ಞಾನದ ಪ್ರಮುಖ ಕೇಂದ್ರವನ್ನಾಗಿ ಮಾಡಿದ ಎಸ್ ಎಂ ಕೃಷ್ಣ ಅವರು ಮಂಡ್ಯ ಜಿಲ್ಲೆಯವರು.
ರೈತರ ಸಾಲಮನ್ನಾ ಮಾಡಿ ಗಮನ ಸೆಳೆದ ಹೆಚ್ ಡಿ ಕುಮಾರಸ್ವಾಮಿ ರಾಮನಗರ ಜಿಲ್ಲೆಯಿಂದ ಆಯ್ಕೆಯಾದವರು, ಇದರ ಜೊತೆಗೆ ಪ್ರಥಮ ಬಾರಿಗೆ ಹಿಂದುಳಿದ ವರ್ಗಗಳ ಹರಿಕಾರ ಎಂಬ ಖ್ಯಾತಿ ಪಡೆದ ದೇವರಾಜ ಅರಸು ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದಿಂದ ಆಯ್ಕೆಯಾದವರು, ದೇವರಾಜು ಅರಸು ನಂತರ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿದ ಸಿದ್ದರಾಮಯ್ಯ ಕೂಡ ಮೈಸೂರು ಜಿಲ್ಲೆಯವರು, ಇವರ ಜೊತೆಗೆ ಮಂಡ್ಯದಿಂದ ಶಂಕರೇಗೌಡ, ಚೌಡಯ್ಯ, ಜಿ. ಮಾದೇಗೌಡ, ಕೋಲಾರದ ಕೃಷ್ಣಪ್ಪ ಸೇರಿದಂತೆ ಹಲವಾರು ಪ್ರಮುಖ ಮುಖಂಡರು ವಿವಿಧ ಪಕ್ಷಗಳಿಂದ ಹಳೇ ಮೈಸೂರು ಭಾಗದಿಂದ ಗೆದ್ದು, ರಾಜ್ಯ ರಾಜಕಾರಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವರು ಹಳೇ ಮೈಸೂರು ಭಾಗದಲ್ಲಿ ರಾಜಕೀಯ ಪಕ್ಷಗಳ ಮೂಲಕ ಉನ್ನತ ಹುದ್ದೆಗಳಿಗೆ ಏರಿದ ಜನ ನಾಯಕರುಗಳು.
ಹಳೇ ಮೈಸೂರು ಭಾಗದಲ್ಲಿ ಪಕ್ಷಗಳ ಬಲಾಬಲ ಹೇಗಿದೆ: ಹಳೇ ಮೈಸೂರು ಭಾಗದ ಸುಮಾರು 10 ಜಿಲ್ಲೆಗಳಲ್ಲಿ 60ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಿವೆ. 1950ರಿಂದ 2008ರ ವರೆಗೆ ಕಾಂಗ್ರೆಸ್ ಹಾಗೂ ಜನತಾದಳದ ನಡುವೆ ನೇರ ಪೈಪೋಟಿ ಇರುತ್ತಿತ್ತು. ಆನಂತರ 2008ರ ನಂತರ ಬಿಜೆಪಿ ಈ ಭಾಗದಲ್ಲಿ ತನ್ನ ನೆಲೆಯನ್ನು ಕಂಡು ಕೊಳ್ಳಲು ಆರಂಭಿಸಿದೆ. ಕಳೆದ 10 ವರ್ಷಗಳಲ್ಲಿ ಈ ಭಾಗದ ಹಲವು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಹಳೇ ಮೈಸೂರು ಭಾಗದಲ್ಲೂ ಬಿಜೆಪಿ ಪ್ರಬಲವಾಗಿ ಬೆಳೆಯುತ್ತಿದೆ. ಈಗ ಬಹುತೇಕ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಡುವೇ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಒಕ್ಕಲಿಗ ಸಮುದಾಯ ಪ್ರಾಬಲ್ಯ: ಹಳೇ ಮೈಸೂರು ಇದೀಗ ಮೂರೂ ಪಕ್ಷಗಳ ಟಾರ್ಗೆಟ್ ಅಖಾಡ ಕೂಡ ಹೌದು. ಚುನಾವಣೆಯಲ್ಲಿ ಹಳೇ ಮೈಸೂರು ಜನರ ಪ್ರೀತಿ ಪಾತ್ರವಾಗಲು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ತಮ್ಮದೇ ಆದ ರೀತಿಯಲ್ಲಿ ಚುನಾವಣಾ ರಣತಂತ್ರ ರೂಪಿಸುತ್ತಿವೆ. ಈ ಭಾಗ ರಾಜಕೀಯ ಪಕ್ಷಗಳಿಗೆ ನಿರ್ಣಾಯಕ ಅಖಾಡ ಕೂಡ ಹೌದು. ಒಕ್ಕಲಿಗ ಸಮುದಾಯ ಪ್ರಾಬಲ್ಯದ ಪ್ರದೇಶವಾಗಿದ್ದರಿಂದ ಈ ಸಮುದಾಯದವರ ಮತ ಬ್ಯಾಂಕ್ ಸೆಳೆಯಲು ಮೂರು ಪಕ್ಷಗಳು ಹಲವು ಕಸರತ್ತು ನಡೆಸುತ್ತಿವೆ.
ಈ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಸೇರಿದಂತೆ ಇತರ ಜಿಲ್ಲೆಗಳಲ್ಲೂ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ ದೊಡ್ಡ ಹೆಜ್ಜೆ ಇಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ನಾಯಕರನ್ನು ಚುನಾವಣಾ ಪ್ರಚಾರಕ್ಕೆ ಕರೆತರುವ ಮೂಲಕ, ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲು ಪ್ಲಾನ್ ಕೂಡ ಮಾಡಿಕೊಂಡಿದೆ. ಅದೇ ರೀತಿ, ತನ್ನ ಸಾಂಪ್ರದಾಯಿಕ ಮತಗಳನ್ನು ಉಳಿಸಿಕೊಂಡು ಹೆಚ್ಚಿನ ಸ್ಥಾನ ಗಳಿಸಲು, ಕಾಂಗ್ರೆಸ್ ಕಳೆದ ಒಂದು ವರ್ಷದಿಂದ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರುಗಳು ಪ್ರಯತ್ನ ನಡೆಸಿದ್ದಾರೆ. ಇದರ ಜೊತೆಗೆ ಜೆಡಿಎಸ್ ಕೂಡ ಹೆಚ್ಚಿನ ಸ್ಥಾನ ಗಳಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದೆ. ಈಗಾಗಲೇ ಪಂಚರತ್ನ ರಥಯಾತ್ರೆ ಸಮಾರೋಪ ಸಮಾರಂಭವನ್ನು ಮೈಸೂರಿನಲ್ಲಿ ಆಯೋಜನೆ ಮಾಡುವ ಮೂಲಕ ಮತ್ತೋಮ್ಮೆ ಹಳೇ ಮೈಸೂರು ಭಾಗದಲ್ಲಿ ತನ್ನ ಹಿಡಿತದಲ್ಲಿ ತೆಗೆದುಕೊಳ್ಳುವ ಪ್ರಯತ್ನ ನಡೆಸಿದೆ. ಇವುಗಳ ಜೊತೆಗೆ ರೈತ ಪಕ್ಷಗಳು ಕೂಡ ಹಿಂದೆ ಬಿದ್ದಿಲ್ಲ ಎಂದೇ ಹೇಳಬಹುದು.
ಈ ಹಿಂದಿನ ಅಂಕಿ - ಅಂಶಗಳನ್ನು ಗಮನಿಸುವುದಾದರೆ: 2013ರಲ್ಲಿ ಜೆಡಿಎಸ್ ಹಳೇ ಮೈಸೂರು ಭಾಗದಲ್ಲಿ 25 ಕ್ಷೇತ್ರಗಳನ್ನು ಗೆದ್ದು ಬೀಗಿತ್ತು. ಅದೇ ಕಾಂಗ್ರೆಸ್ ಪಕ್ಷ ಸುಮಾರು 27 ಕ್ಷೇತ್ರಗಳಲ್ಲಿ ಗೆದ್ದಿತ್ತು. ಇನ್ನು ಬಿಜೆಪಿ 8 ಸ್ಥಾನಗಳಲ್ಲಿ ಗೆದ್ದಿತ್ತು. 2013ರ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷ ಶೇ. 38ರಷ್ಟು ಮತ ಪಾಲು ಪಡೆದಿತ್ತು. ಇನ್ನು ಜೆಡಿಎಸ್ ಶೇ. 34ರಷ್ಟು ಮತ ಪಾಲು ಗಳಿಸಿತ್ತು. ಬಿಜೆಪಿ ಸುಮಾರು 10 -13ರಷ್ಟು ಮತ ಬ್ಯಾಂಕ್ ಗಳಿಸಿತ್ತು. ಕೆಜೆಪಿ ಶೇ. 9ಕ್ಕೂ ಹೆಚ್ಚು ಮತ ಪಾಲು ಪಡೆದಿತ್ತು.
2018ರಲ್ಲಿ ಜೆಡಿಎಸ್ ಪಕ್ಷ ಸುಮಾರು 31 ಸ್ಥಾನ ಗೆದ್ದು, ತನ್ನ ಹಿಡಿತವನ್ನು ಸದೃಢಗೊಳಿಸಿತ್ತು. ಕಾಂಗ್ರೆಸ್ ಪಕ್ಷ ಸುಮಾರು 19 ಸ್ಥಾನ ಗೆದ್ದರೂ ಕುಸಿತ ಕಂಡಿತ್ತು. ಬಿಜೆಪಿ 10 ಸ್ಥಾನ ಗೆದ್ದು ಉತ್ತಮ ಪ್ರದರ್ಶನ ನೀಡಿತ್ತು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಜೆಡಿಎಸ್ ಹಳೆ ಮೈಸೂರು ಭಾಗದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿತು. ಜೆಡಿಎಸ್ ವರಿಷ್ಠ ದೇವೇಗೌಡರನ್ನು ತೀವ್ರವಾಗಿ ಟೀಕಿಸಿರುವುದು ಕಾಂಗ್ರೆಸ್ಗೆ ಹಿನ್ನಡೆಗೆ ಕಾರಣವಾಗಿತ್ತು ಎಂದು ವಿಶ್ಲೇಷಣೆ ಮಾಡಲಾಗಿತ್ತು. ಸಿದ್ದರಾಮಯ್ಯ ಅವರೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಅನುಭವಿಸಬೇಕಾಯಿತು. ಇತ್ತ ಎರಡು ಕ್ಷೇತ್ರಗಳಲ್ಲಿ ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ಸ್ಪರ್ಧಿಸಿದ್ದ ಹೆಚ್.ಡಿ.ಕುಮಾರಸ್ವಾಮಿ ಗೆದ್ದು ಬೀಗಿದ್ದರು. ಇನ್ನು ಹಳೆ ಮೈಸೂರಿನಲ್ಲಿ ದುರ್ಬಲವಾಗಿರುವ ಬಿಜೆಪಿ 2018ರ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿಸಿತು. ಅದಕ್ಕೆ ಮೋದಿ ಮತ್ತು ಶಾ ಪ್ರಮುಖ ಕಾರಣ ಎಂದು ಹೇಳಬಹುದು.
ಹಳೇ ಮೈಸೂರು ಭಾಗದ ಸಮಸ್ಯೆಗಳೇನು: ಹಳೇ ಮೈಸೂರು ಭಾಗ ಹಲವಾರು ರಾಜಕೀಯ ನಾಯಕರಿಗೆ ಶಕ್ತಿ ತುಂಬಿದ ಭಾಗ. ಘಟಾನುಘಟಿ ನಾಯಕರಿದ್ದರು ಹಲವಾರು ಸಮಸ್ಯೆಗಳು ಇಂದಿಗೂ ಸಹ ಪರಿಹಾರ ಕಂಡಿಲ್ಲ. ಮುಖ್ಯವಾಗಿ ಕೋಲಾರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಜೊತೆಗೆ ಬರಡು ಪ್ರದೇಶ ಇನ್ನೂ ಹಸಿರು ಆಗಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಲವಾರು ಕೈಗಾರಿಕಾ ಪ್ರದೇಶಗಳಿದ್ದರೂ ಸ್ಥಳೀಯ ಯುವಕರಿಗೆ ಸರಿಯಾದ ಉದ್ಯೋಗ ಇಲ್ಲ. ರಾಮನಗರ ಜಿಲ್ಲೆಯಲ್ಲಿ ರೇಷ್ಮೆ ಹಾಗೂ ಹಣ್ಣು ಯಥೇಚ್ಛವಾಗಿ ಬೆಳೆಯುತ್ತಿದ್ದರೂ ಇಲ್ಲಿ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಮಂಡ್ಯ ಜಿಲ್ಲೆಯಲ್ಲಿ ನೀರಾವರಿಯಿಂದ ಹಸಿರಿದ್ದರು. ಗ್ರಾಮಾಂತರ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಇನ್ನು ಮೈಸೂರು ಜಿಲ್ಲೆ ಬಹುತೇಕ ಯಾವುದೇ ಸಮಸ್ಯೆಗಳು ಅಷ್ಟಾಗಿ ಜನರನ್ನು ಕಾಡುತ್ತಿಲ್ಲ. ಆದರೂ, ಹೆಚ್ ಡಿ.ಕೋಟೆ ಭಾಗದಲ್ಲಿ ಇರುವ ಬುಡಕಟ್ಟು ಜನಾಂಗಕ್ಕೆ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಇನ್ನು ತುಮಕೂರು ಸಹ ಕೆಲವು ಸಮಸ್ಯೆಗಳಿಂದ ಹೊರ ಬಂದಿಲ್ಲ. ಇವುಗಳಲ್ಲದೇ ಈ ಭಾಗದ ಜನ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗಾಗ ಪ್ರತಿಭಟನೆಗಳನ್ನು ನಡೆಸುತ್ತಲೇ ಇರುತ್ತಾರೆ.
ಒಟ್ಟಾರೆ ಹಳೇ ಮೈಸೂರು ಭಾಗ ಕರ್ನಾಟಕ ರಾಜಕಾರಣದ ಶಕ್ತಿ ಕೇಂದ್ರ. ಈ ಭಾಗಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಮೂರು ಪಕ್ಷಗಳು ಈಗಾಗಲೇ ಅಬ್ಬರದ ಪ್ರಚಾರ ಹಾಗೂ ನಾನಾ ತಂತ್ರಗಳ ಮೂಲಕ ಪ್ರಯತ್ನ ಮಾಡುತ್ತಿದೆ. ರಾಜ್ಯ ರಾಜಕಾರಣದ ಪ್ರಮುಖ ಶಕ್ತಿ ಕೇಂದ್ರ ಕೂಡಾ ಹೌದು. ಇಲ್ಲಿನ ರಾಜಕೀಯ ಇತಿಹಾಸ, ರಾಜ ಮನೆತನದ ಕೊಡುಗೆ, ಇಲ್ಲಿನ ಜನ ನಾಯಕರ ಕುರಿತು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಮ್ಮ 50 ವರ್ಷದ ರಾಜಕೀಯ ಜೀವನದ ಅನುಭವದ ಈ ರೀತಿಯಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ರಾಜಕೀಯವಾಗಿ ನಿರ್ಣಾಯಕ ಅಖಾಡ ಹಳೆ ಮೈಸೂರು ಭಾಗ: ಗೆಲುವಿಗಾಗಿ ಮೂರು ಪಕ್ಷಗಳಿಂದ ಚುನಾವಣಾ ರಣತಂತ್ರ