ಮೈಸೂರು : ನಂಜನಗೂಡಿನ ಕಪಿಲಾ ನದಿಗೆ ಸ್ನಾನ ಮಾಡಲು ಹಾಗೂ ಬಟ್ಟೆ ಎಸೆಯಲು ಎರಡು ತಿಂಗಳಿನಿಂದ ಭಕ್ತಾದಿಗಳು ಬಾರದ ಹಿನ್ನೆಲೆಯಲ್ಲಿ ಇದೇ ಒಳ್ಳೆ ಚಾನ್ಸ್ ಎಂದು ಕೊರೊನಾ ಒತ್ತಡದ ನಡುವೆ ಅಧಿಕಾರಿಗಳು ನದಿ ಸ್ವಚ್ಛ ಮಾಡುತ್ತಿದ್ದಾರೆ. ಐತಿಹಾಸಿಕ ನಂಜನಗೂಡು ದೇವಸ್ಥಾನ ಬಾಗಿಲು ಹಾಕಿರುವುದರಿಂದ ಹಾಗೂ ಲಾಕ್‌ಡೌನ್ ಇರುವುದರಿಂದ ಭಕ್ತಾದಿಗಳು ಇತ್ತ ಮುಖ ಮಾಡುವುದನ್ನು ಬಿಟ್ಟಿರುವುದರಿಂದ, ಕಪಿಲಾ ನದಿ ಸ್ವಚ್ಛವಾಗಿ ಹರಿಯುತ್ತಿದ್ದಾಳೆ.
ಆದರೆ, ಕಪಿಲಾ ನದಿಯಲ್ಲಿರುವ ತ್ಯಾಜ್ಯ ಮಾತ್ರ ಹಾಗೇ ಇದ್ದದರಿಂದ, ಕೊರೊನಾ ಕೆಲಸದ ಒತ್ತಡದ ನಡುವೆಯೂ ತಾಲೂಕು ಆಡಳಿತ ಹಾಗೂ ಪುರಸಭೆ ವತಿಯಿಂದ ಇಂದು ಹಾಗೂ ನಾಳೆ ಕಪಿಲಾ ಸ್ವಚ್ಛತಾ ಅಭಿಯಾನವನ್ನ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಕೆಲ ಸಂಘ-ಸಂಸ್ಥೆಗಳು ಸಾಥ್ ನೀಡಿವೆ. ಕಪಿಲಾ ನದಿಯಲ್ಲಿರುವ ಬಟ್ಟೆ, ಬ್ಯಾಗ್ ಇತರೆ ತ್ಯಾಜ್ಯಗಳನ್ನು ತೆಗೆಯಲು ತಹಶೀಲ್ದಾರ್ ಮೋಹನ್ ಕುಮಾರಿ ಅವರು ಕೂಡ ಅಸಹ್ಯ ಪಟ್ಟಿಕೊಳ್ಳದೇ ನದಿಯ ಸ್ವಚ್ಛತೆಗೆ ಕೈ ಜೋಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಹಲವು ದಿನಗಳಿಂದ ನದಿ ಸ್ವಚ್ಛ ಮಾಡಬೇಕೆಂದು ಅಧಿಕಾರಿಗಳು ನಿರ್ಧರಿಸಿದ್ದರು. ಆದರೆ, ಕಾಲ ಕೂಡಿ ಬಂದಿರಲಿಲ್ಲ. ಇದೀಗ ಒತ್ತಡದ ನಡುವೆ ಸ್ವಚ್ಛತೆ ಮಾಡಲು ಮುಂದಾಗಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ತಹಶೀಲ್ದಾರ್ ಮೋಹನ್‌ಕುಮಾರಿ, ಕಪಿಲಾ ಸ್ವಚ್ಛತಾ ಅಭಿಯಾನ ಆರಂಭಿಸಿದ್ದೀವಿ. ನದಿಗಳಿಗೆ ತ್ಯಾಜ್ಯ ಬಿಡುವುದರಿಂದ ಪಾಪ ಹೋಗುವುದಿಲ್ಲ. ನದಿಗಳು ಸ್ವಚ್ಛವಾಗಿ ಹರಿಯಲು ಎಲ್ಲರು ಕೈ ಜೋಡಿಸಬೇಕು ಎಂದರು.