ಮೈಸೂರು: ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದಂತೆ ಮತದಾರರು ಚುನಾವಣಾ ಅಭ್ಯರ್ಥಿಗಳಿಗೆ ಹಾಗೂ ಅಧಿಕಾರಿಗಳಿಗೆ ಮತದಾನವನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದು ಆತಂಕವನ್ನುಂಟು ಮಾಡಿದ್ದಾರೆ.
ಹೌದು, ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಹೊಸವರಹುಂಡಿ ಗ್ರಾಮದ ಗ್ರಾಮಸ್ಥರು ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಗ್ರಾಮದಲ್ಲಿ ಮತಗಟ್ಟೆ ಇಲ್ಲದ ಕಾರಣ ಚುನಾವಣೆ ಬಹಿಷ್ಕರಿಸುತ್ತಿರುವ ಗ್ರಾಮಸ್ಥರು, ನಮ್ಮ ಗ್ರಾಮದಲ್ಲೇ ಮತಗಟ್ಟೆ ನಿರ್ಮಾಣ ಮಾಡುವ ತನಕ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ನಮ್ಮ ಗ್ರಾಮಕ್ಕೂ ಮತಗಟ್ಟೆ ನಿರ್ಮಾಣ ಮಾಡಿರುವ ಗ್ರಾಮಕ್ಕೂ ಕಿಲೋಮೀಟರ್ನಷ್ಟು ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಗ್ರಾಮದಲ್ಲಿ ವಯೋವೃದ್ಧರು, ಮಹಿಳೆಯರು ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ನಮ್ಮ ಗ್ರಾಮದಲ್ಲಿ 1 ಸಾವಿರಕ್ಕೂ ಹೆಚ್ಚು ಮತದಾರರಿದ್ದು, ನಮಗೆ ಮತಗಟ್ಟೆ ಇಲ್ಲದೆ ಇರುವುದು ಬೇಸರದ ಸಂಗತಿ ಎಂದು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಗೆದ್ದಂತಹ ಶಾಸಕರು, ಸಂಸದರು ನಮ್ಮ ಗ್ರಾಮವನ್ನು ನಿರ್ಲಕ್ಷಿಸಿದ್ದಾರೆ. ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ನಮ್ಮ ಗ್ರಾಮಕ್ಕೆ ಯಾವುದೇ ರಾಜಕಾರಣಿಗಳನ್ನು ಬರಲು ಬಿಡುವುದಿಲ್ಲ. ಕೆರೆಕಟ್ಟೆಗಳು ಬರಿದಾಗಿವೆ. ದನ, ಕರುಗಳಿಗೆ ಕುಡಿಯಲು ನೀರಿಲ್ಲ. ಇಂತಹ ಸಂದರ್ಭದಲ್ಲಿ ನಾವು ಮತದಾನ ಮಾಡಿಯೂ ಪ್ರಯೋಜನ ಇಲ್ಲ. ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆ ಬಹಿಷ್ಕರಿಸುವಂತೆ ಇಡೀ ಗ್ರಾಮಸ್ಥರು ಒಮ್ಮತದಿಂದ ನಿರ್ಧಾರ ಮಾಡಿದ್ದೇವೆ ಎಂದು ಅಧಿಕಾರಿಗಳ ಬಳಿ ದೂರಿದ್ದಾರೆ. ಇದರ ಬಗ್ಗೆ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಚುನಾವಣಾಧಿಕಾರಿಗಳು ಭರವಸೆ ನೀಡಿದ್ದಾರೆ.