ಮೈಸೂರು: ಚೆಸ್ಕಾಂನಿಂದ ಅನುಮತಿ ಸಿಕ್ಕಿದ್ದರೆ, ಡಬ್ಬಲ್ ಡೆಕ್ಕರ್ ನಲ್ಲಿ ಮೈಸೂರಿನ ಪ್ರವಾಸಿ ತಾಣಗಳ ಅಂದವನ್ನು ಸರಳ ದಸರಾದಲ್ಲಿಯೇ ಕಣ್ತುಂಬಿಕೊಳ್ಳಬಹುದಾಗಿತ್ತು. ಆದರೆ, ಚೆಸ್ಕಾಂ ತಾಂತ್ರಿಕ ಕಾರಣದಿಂದ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ನಿರಾಸೆ ಉಂಟಾಗಿದೆ.
ಹೌದು, ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ಪ್ರವಾಸೋದ್ಯಮ ಇಲಾಖೆ ಆವರಣದಲ್ಲಿರುವ 'ಅಂಬಾರಿ' ಡಬ್ಬಲ್ ಡೆಕ್ಕರ್ ನಿಂತಲ್ಲೇ ನಿಂತಿರುವುದರಿಂದ, ಡಬ್ಬಲ್ ಡೆಕ್ಕರ್ನಲ್ಲಿ ನಗರ ಪ್ರದಕ್ಷಣೆ ಮಾಡುತ್ತೀವಿ ಎಂಬ ಆಸೆ ಇಟ್ಟುಕೊಂಡಿದ್ದ ಸ್ಥಳೀಯರಿಗೆ, ಮೈಸೂರು ವೀಕ್ಷಿಸಲು ಬರುವ ಪ್ರವಾಸಿಗರಿಗೆ ತುಸು ಬೇಸರ ತಂದಿದೆ.
ಬೆಂಗಳೂರು ಮೂಲದ ಕೆಎಂಎಸ್ ಕೋಚ್ ಬಿಲ್ಡಸ್೯ ಸಂಸ್ಥೆ ಡಬ್ಬಲ್ ಡೆಕ್ಕರ್ ಬಸ್ಗಳ ಬಾಡಿ ತಯಾರು ಮಾಡಿದ್ದು, ಪ್ರವಾಸಿ ತಾಣಗಳ ಮುಂದೆ ಬಸ್ ನಿಂತಾಗ ಎಲ್ಇಡಿ ಟಿವಿ ಮೂಲಕ ಪ್ರವಾಸಿ ತಾಣಗಳ ವಿಡಿಯೋ ಹಾಗೂ ಆಡಿಯೋ ಮಾಹಿತಿ ಸಿಗಲಿದೆ. ಇದರಿಂದ ಪ್ರವಾಸಿಗರಿಗೆ ಪ್ರವಾಸಿ ತಾಣಗಳ ವಿವರಣೆ ಡಿಸ್ಪ್ಲೆಯಾಗುವುದರಿಂದ ಕುತೂಹಲ ಮೂಡಲಿದೆ.
ಅಂಬಾರಿ ಹೆಸರಿನ ಡಬ್ಬಲ್ ಡೆಕ್ಕರ್ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಎರಡು ವರ್ಷಗಳ ಹಿಂದೆಯೇ ಮೈಸೂರಿನಲ್ಲಿ ಡಬ್ಬಲ್ ಡೆಕ್ಕರ್ ಬಸ್ ಗಳ ಸೇವೆಗೆ ಯೋಜನೆ ರೂಪಿಸಿತ್ತು. ಡಬ್ಬಲ್ ಡೆಕ್ಕರ್ ಬಸ್ ಸಂಚರಿಸುವ ರಸ್ತೆಯ ಮಧ್ಯೆ ಹಾದು ಹೋಗುವ ಮರಗಳ ರೆಂಬೆಗಳು ಹಾಗೂ ವಿದ್ಯುತ್ ತಂತಿಗಳನ್ನು ತೆರವುಗೊಳಿಸಬೇಕಿದೆ.