ಮೈಸೂರು: ಈ ಬಾರಿ ಜಂಬೂ ಸವಾರಿಯಲ್ಲಿ ನಂದಿ ಧ್ವಜ ಪೂಜೆಗಷ್ಟೇ ಸೀಮಿತವಾಗಿರುವುದರಿಂದ, ನಂದಿ ಧ್ವಜ ಕಲಾವಿದರಲ್ಲಿ ಅಸಮಾಧಾನ ಭುಗಿಲೆದ್ದಿದೆ. ದಸರಾ ಪರಂಪರೆಯಲ್ಲೇ ಮೊದಲ ಬಾರಿಗೆ ಉತ್ಸವದಲ್ಲಿ ನಂದಿ ಧ್ವಜ ಸಾಗದೆ ಮುಖ್ಯಮಂತ್ರಿಯಿಂದ ಪೂಜೆಗಷ್ಟೇ ಸೀಮಿತವಾಗಿದೆ. ಅರಮನೆಯೊಳಗೆ ಜಂಬೂ ಸವಾರಿ ನಡೆಯುವುದರಿಂದ ಈ ರೀತಿ ಮಾಡಲಾಗಿದೆ. ಆದರೆ, ಈ ಹಿಂದೆ ಸರಳ ಆಚರಣೆ ವೇಳೆಯೂ ನಂದಿ ಧ್ವಜ ಮೆರವಣಿಗೆಗೆ ಅವಕಾಶವಿತ್ತು.
ವೀರಪ್ಪ ಮೊಯ್ಲಿ, ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸರಳ ದಸರಾ ನಡೆದಿತ್ತು. ಆದರೆ, ಈ ಕೊರೊನಾ ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆ ಮಾಡುತ್ತಿರುವುದರಿಂದ ನಂದಿ ಧ್ವಜಕ್ಕೆ ಪೂಜೆ ಮಾಡಲಾಗುವುದು. ಆದರೆ, ಮೆರವಣಿಗೆಯಲ್ಲಿ ಸಾಗದೇ ಇರುವುದರಿಂದ ನಂದಿ ಧ್ವಜ ಎತ್ತಿ ಕುಣಿಯುವವರು, ಆರಾಧಕರಲ್ಲಿ ಬೇಸರ ಮೂಡಿಸಿದೆ.
ದಸರಾ ಜಂಬೂಸವಾರಿ ಮೆರವಣಿಗೆಗೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ, ಸ್ತಬ್ಧಚಿತ್ರ ಹಾಗೂ ವಿವಿಧ ಕಲಾತಂಡಗಳು ಸಾಗುತ್ತಿದ್ದವು. ಈವರೆಗೆ ಅರಮನೆಯೊಳಗೆ ನಂದಿ ಧ್ವಜ ಪೂಜೆ ಮಾಡುವ ಸಂಪ್ರದಾಯ ನಡೆದಿಲ್ಲ. ಹೀಗಾಗಿ ನೀವು ಕೋಟೆ ಆಂಜನೇಯ ಸ್ವಾಮಿ ಮುಂಭಾಗದಲ್ಲೇ ಕುಣಿದು ವಾಪಾಸ್ಸಾಗಿ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಧಿಕಾರಿಗಳ ಸೂಚನೆಯಿಂದ ಆಕ್ರೋಶಗೊಂಡಿರುವ ನಂದಿ ಧ್ವಜ ಕಲಾ ತಂಡದ ಉಡಿಗಾಲ ಮಹದೇವಪ್ಪ ಕುಟುಂಬದವರು, 58 ವರ್ಷದಿಂದ ನಂದಿ ಧ್ವಜ ಕುಣಿತದಲ್ಲಿ ಭಾಗಿಯಾಗಿದ್ದೇವೆ, ಈ ಬಾರಿ ಸಂಪ್ರದಾಯದ ನೆಪವೊಡ್ಡಿ ನಂದಿ ಧ್ವಜ ಕುಣಿತವನ್ನ ಪೂಜೆಗಷ್ಟೇ ಸೀಮಿತಗೊಳಿಸಿದ್ದಾರೆ ಮಲ್ಲಿಕಾರ್ಜುನ್ ಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.