ಮೈಸೂರು : ಕಬಿನಿ ಹಿನ್ನೀರಿನಲ್ಲಿ ನೀರು ಕುಡಿಯಲು ಹೋಗಿದ್ದಾಗ ಕೊಂಬಿಗೆ ಮೀನಿನ ಬಲೆ ಸಿಕ್ಕಿಹಾಕಿಕೊಂಡು ಜಿಂಕೆಗಳು ಪ್ರಾಣಾಪಾಯಕ್ಕೆ ಸಿಲುಕಿದ್ದವು. ಸಂಕಷ್ಟದಲ್ಲಿದ್ದ ಮೂರು ಜಿಂಕೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿದು ಬಲೆ ಬಿಡಿಸಿ, ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ. ಕುಪ್ಪೆ ವನ್ಯಜೀವಿ ಪ್ರದೇಶದ ವ್ಯಾಪ್ತಿಯಲ್ಲಿ ನೀರು ಕುಡಿಯಲು ಹೋದಾಗ ಜಿಂಕೆಗಳ ಕೊಂಬಿಗೆ ಮೀನಿನ ಬಲೆ ಸಿಲುಕಿಕೊಂಡಿತ್ತು. ಬಲೆ ಕೊಂಬಿಗೆ ಸುತ್ತಿಕೊಂಡೇ ಓಡಾಡುತ್ತಿದ್ದವು. ಈ ದೃಶ್ಯವನ್ನು ವನ್ಯಜೀವಿ ಛಾಯಾಗ್ರಾಹಕರು ಸೆರೆ ಹಿಡಿದಿದ್ದರು. ಅರಣ್ಯ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ, ಜಿಂಕೆಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ನಂತರ ಕೊಂಬಿಗೆ ಸಿಲುಕಿಕೊಂಡಿದ್ದ ಮೀನಿನ ಬಲೆಯನ್ನು ಬಿಡಿಸಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಅಕ್ರಮವಾಗಿ ಬಲೆಗಳನ್ನು ಹಾಕುತ್ತಾರೆ. ಈ ಸಂದರ್ಭದಲ್ಲಿ ನೀರು ಕುಡಿಯಲು ಬರುವ ಪ್ರಾಣಿಗಳು ಬಲೆಗೆ ಸಿಲುಕಿಕೊಳ್ಳುವುದು ಸಾಮಾನ್ಯವಾಗಿದೆ. ಅದೇ ರೀತಿ ನೀರು ಕುಡಿಯಲು ಬಂದ ಜಿಂಕೆಗಳ ಕೊಂಬಿಗೆ ಬಲೆ ಸಿಲುಕಿಕೊಂಡಿತ್ತು. ಸಫಾರಿ ವೇಳೆ ಜಿಂಕೆಯೊಂದು ತನ್ನ ಕೊಂಬಿಗೆ ಮೀನಿನ ಬಲೆಯನ್ನು ಸಿಕ್ಕಿಸಿಕೊಂಡು ಬಿಡಿಸಿಕೊಳ್ಳಲು ಪರದಾಡುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಜಿಂಕೆ ಪತ್ತೆಹಚ್ಚಿ ಕೊಂಬಿಗೆ ಸಿಲುಕಿದ ಬಲೆಬಿಡಿಸುವಂತೆ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ವನ್ಯಜೀವಿಪ್ರಿಯರು ಒತ್ತಾಯಿಸಿದ್ದರು.
ಕಪ್ಪು ಚಿರತೆಗೆ ಗಾಯ, ಕಾರಣವೇನು ಗೊತ್ತೇ? : ಹಲವು ತಿಂಗಳ ಬಳಿಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆ ಸಫಾರಿ ಕೇಂದ್ರದ ವ್ಯಾಪ್ತಿಯಲ್ಲಿ ಕರಿಚಿರತೆ ಪತ್ತೆಯಾಗಿತ್ತು. ಈ ಸಂದರ್ಭದಲ್ಲಿ ಮೈಮೇಲೆ ಗಾಯದ ಗುರುತುಗಳು ಕಾಣಿಸಿಕೊಂಡಿದ್ದವು. ಇದನ್ನು ಕಂಡ ವನ್ಯಜೀವಿಪ್ರಿಯರು ತನ್ನ ಗಡಿಗಾಗಿ ಕಾದಾಡುವಾಗ ಕರಿಚಿರತೆ ಗಾಯಗೊಂಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಇತ್ತೀಚಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಚಿರತೆಗಳ ಸಂತತಿ ಹೆಚ್ಚಾಗುತ್ತಿದೆ. ಇದರ ಜೊತೆ ಅಪರೂಪದ ಕರಿಚಿರತೆ ಕಳೆದ ಕೆಲವು ತಿಂಗಳುಗಳಿಂದ ನಾಪತ್ತೆಯಾಗಿತ್ತು. ಅದು ವಾಸವಿದ್ದ ಅರಣ್ಯ ವ್ಯಾಪ್ತಿಗೆ ಮತ್ತೊಂದು ಚಿರತೆ ಬಂದಿರುವ ಅನುಮಾನವಿದೆ. ಕರಿ ಚಿರತೆ ತನ್ನ ಸುಪರ್ದಿಗೆ ಬಂದ ಸಂದರ್ಭದಲ್ಲಿ ಎರಡೂ ಚಿರತೆಗಳ ನಡುವೆ ಘರ್ಷಣೆ ನಡೆದಿರುವ ಬಗ್ಗೆ ಶಂಕೆ ಇದೆ. ಕರಿ ಚಿರತೆಯ ಕುತ್ತಿಗೆ ಹಾಗೂ ಬಾಲದ ಭಾಗಗಳಲ್ಲಿ ಕಾದಾಟದ ಸಂದರ್ಭದಲ್ಲಿ ಗಾಯವಾದ ಗುರುತುಗಳು ಇವೆ ಎಂದು ವನ್ಯಜೀವಿ ಛಾಯಾಗ್ರಾಹಕ ಶ್ರೇಯಸ್ ದೇವನೂರು ಈಟಿವಿ ಭಾರತ್‌ಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ : ನಾಗರಹೊಳೆ: ಅರಣ್ಯ ಇಲಾಖೆ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಕರಿ ಚಿರತೆ