ಮೈಸೂರು: ನಗರದಲ್ಲಿರುವ ಹೆಚ್ಚಿನ ಕಟ್ಟಡಗಳು ಪಾರಂಪರಿಕ ಕಟ್ಟಡಗಳೇ ಆಗಿವೆ. ವಿವಿಧ ಕಟ್ಟಡಗಳು ಬೇರೆ ಬೇರೆ ಮಹರಾಜರ ಕಾಲದಲ್ಲಿ ನಿರ್ಮಾಣಗೊಂಡಿವೆ. ರಾಜ್ಯ ಸರ್ಕಾರ 2004 ರಲ್ಲಿ ಮೈಸೂರನ್ನು ಪಾರಂಪರಿಕ ನಗರ ಎಂದು ಘೋಷಣೆ ಮಾಡಿದೆ.
ನಗರದಲ್ಲಿ 234 ಪಾರಂಪರಿಕ ಕಟ್ಟಡಗಳನ್ನು ಗುರುತಿಸಲಾಗಿದ್ದು, ಆ ಪೈಕಿ 198 ಅಂತಿಮಗೊಳಿಸಲಾಗಿದೆ. ಈ ಪಾರಂಪರಿಕ ಕಟ್ಟಡಗಳಲ್ಲಿ 17 ಅರಮನೆಗಳನ್ನು ಹೊರತುಪಡಿಸಿದರೆ, ಉಳಿದವು ಮೈಸೂರು ವಿಶ್ವವಿದ್ಯಾನಿಲಯ, ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ವಸತಿ ಗೃಹಗಳು, ಮಾರುಕಟ್ಟೆಗಳು , ಕಾಲೇಜುಗಳು, ರೈಲ್ವೆ ನಿಲ್ದಾಣ, ಗೋಪುರದ ಗಡಿಯಾರಗಳು ಸೇರಿವೆ.
ಅಪಾಯದ ಸ್ಥಿತಿಯಲ್ಲಿ ಪಾರಂಪರಿಕ ಕಟ್ಟಗಳು :
ಪಾರಂಪರಿಕ ನಗರ ಎಂದು ಮೈಸೂರನ್ನು ಘೋಷಣೆ ಮಾಡಿರುವ ರಾಜ್ಯ ಸರ್ಕಾರ, ಇದರ ನಿರ್ವಹಣೆಗೆ ಬೇಕಾದ ಹಣವನ್ನು ಸರಿಯಾಗಿ ನೀಡಿಲ್ಲ. ಹೀಗಾಗಿ, ಪಾರಂಪರಿಕ ಕಟ್ಟಗಳು ಶಿಥಿಲಾವಸ್ಥೆ ತಲುಪಿವೆ. 2012 ರಲ್ಲಿ ಲ್ಯಾನ್ಸ್ ಡೌನ್ ಕಟ್ಟಡ ಶಿಥಿಲಗೊಂಡು ಕುಸಿದು ಬಿದ್ದು 3 ಮಂದಿ ಮೃತಪಟ್ಟಿದ್ದರು. ದೇವರಾಜ ಮಾರುಕಟ್ಟೆ ಕೂಡ ಕುಸಿದು ಬಿದ್ದಿದ್ದು, ಇಲ್ಲಿ 2 ಸಾವಿರಕ್ಕೂ ಹೆಚ್ಚು ಅಂಗಡಿಗಳಿವೆ. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯ ಗೋಪುರ ಕುಸಿದಿದೆ. ಅಲ್ಲದೆ ಪಾರಂಪರಿಕ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಮುಖ್ಯದ್ವಾರವೇ ಕುಸಿದು ಬಿದ್ದಿದೆ. ಜೊತೆಗೆ ದೊಡ್ಡ ಗಡಿಯಾರದ ಗೋಪುರ ಬಿರುಕು ಬಿಟ್ಟಿದ್ದು, ಇವುಗಳ ಜೊತೆ ಹಲವಾರು ಕಚೇರಿಗಳು, ಪಾರಂಪರಿಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ.
ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಸರ್ಕಾರದಿಂದ ಯಾವುದೇ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಪಾರಂಪರಿಕ, ಪುರಾತತ್ವ ಹಾಗೂ ವಸ್ತು ಸಂಗ್ರಹಾಲಯ ಇಲಾಖೆಯ ಆಯುಕ್ತರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಸರ್ಕಾರ ಹಣ ಕೊಟ್ಟರೆ ಸರಿಪಡಿಸಬಹುದು ಎಂದು ಅವರು ಹೇಳುತ್ತಾರೆ.
ತಜ್ಞರು ಹೇಳುವುದೇನು?
ಪಾರಂಪರಿಕ ನಗರವೆಂದು 2004 ರಲ್ಲಿ ಮೈಸೂರು ಮತ್ತು ಶ್ರೀರಂಗಪಟ್ಟಣವನ್ನು ಸರ್ಕಾರ ಘೋಷಣೆ ಮಾಡಿದೆ. ಆದರೆ ಇಲ್ಲಿಯವರೆಗೆ ಪಾರಂಪರಿಕ ಕಟ್ಟಡಗಳ ನಿರ್ವಹಣೆಗೆ ಹಾಗೂ ಸಂರಕ್ಷಣೆಗೆ ಯಾವುದೇ ಹಣ ನೀಡಿಲ್ಲ. ಇದರಿಂದ ಕಟ್ಟಡಗಳು ಪ್ರತಿ ವರ್ಷವು ಒಂದೊಂದದಾಗಿ ಬೀಳುತ್ತಿವೆ ಎಂದು ವಿವರವಾಗಿ ಅಂಕಿ ಅಂಶಗಳ ಸಮೇತ ಮೈಸೂರು ಪಾರಂಪರಿಕ ಪ್ರದೇಶ ಸಂರಕ್ಷಣಾ ಮತ್ತು ಅಭಿವೃದ್ಧಿ ಸಮಿತಿಯ ಸದಸ್ಯ ಪ್ರೊ.ರಂಗರಾಜು ತಿಳಿಸಿದ್ದಾರೆ.