ಮೈಸೂರು: ಮನೆಯಲ್ಲಿ ಐಸೋಲೇಟ್ ಆಗಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ಸೇರಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಜಯರಾಂ ಹೇಳಿದರು.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಮನೆಯಲ್ಲಿ ಐಸೋಲೇಟ್ ಆಗಿರುವ ಕೋವಿಡ್ ಸೋಂಕಿತರು ಹೊರಗಡೆ ಓಡಾಡಿ ಇತರರಿಗೆ ಸೋಂಕು ಹಬ್ಬಿಸುತ್ತಿದ್ದಾರೆ. ಹಾಗಾಗಿ, ಅವರನ್ನು ಮನವೊಲಿಸಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸುವುದು ಸೂಕ್ತ ಎಂದರು.
ಜಿಲ್ಲೆಯಲ್ಲಿ ಆರಂಭಿಸಿರುವ ಕೋವಿಡ್ ಮಿತ್ರ ಪರಿಕಲ್ಪನೆ ಚೆನ್ನಾಗಿದೆ. ಕೋವಿಡ್ ಸೋಂಕಿತರಿಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡಿ, ಗಂಭೀರ ಸ್ಥಿತಿ ಎದುರಾಗದಂತೆ ತಡೆಯಲು ಇದು ಪೂರಕವಾಗಿದೆ. ಗ್ರಾಮೀಣ ಪ್ರದೇಶಗಳ ಬಹುತೇಕ ಮನೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಅಂತಹ ಮನೆಯಲ್ಲಿ ವಾಸಿಸುವ ಸೋಂಕಿತರನ್ನು ಸಮೀಪದ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಓದಿ : ಚಿತ್ರದುರ್ಗ ಜಿಲ್ಲೆಯಲ್ಲಿ ಇಂದಿನಿಂದ ಎರಡು ದಿನ ವಿಕೇಂಡ್ ಲಾಕ್ಡೌನ್
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್.ಮಂಜುನಾಥಸ್ವಾಮಿ, ಜಿಲ್ಲಾ ಪಂಚಾಯತ್ ಸಿಇಒ ಎ.ಎಂ.ಯೋಗೀಶ್, ನಗರ ಪಾಲಿಕೆ ಆಯುಕ್ತ ಶಿಲ್ಪನಾಗ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಡಿ.ಬಿ.ನಟೇಶ್ ಹಾಗೂ ಅಧಿಕಾರಿಗಳು ಇದ್ದರು.
ಸಭೆಯ ನಂತರ ಬೀಡಿ ಕಾರ್ಮಿಕರ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಕೋವಿಡ್ ಮಿತ್ರ, ವರಕೋಡು ಮೊರಾರ್ಜಿ ದೇಸಾಯಿ ಶಾಲೆಯಲ್ಲಿರುವ ಕೋವಿಡ್ ಕೇರ್ ಸೆಂಟರ್, ಕೀಳನಪುರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಿದ್ದರಾಮನಹುಂಡಿ ಪ್ರಾಥಮಿಕ ಆರೋಗ್ಯ ಮುಂತಾದ ಕಡೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.