ಮೈಸೂರು: ಕೊರೊನಾದಿಂದ ಕಳೆದ ಕೆಲವು ತಿಂಗಳಿನಿಂದ ಸ್ಥಗಿತಗೊಂಡಿದ್ದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸಫಾರಿ ಮತ್ತೆ ಇಂದಿನಿಂದ ಶುರುವಾಗಿದೆ.
ಕೊರೊನಾ ಲಾಕ್ಡೌನ್ ನಿಂದ ಕಳೆದ 7 ತಿಂಗಳಿನಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಆದರೆ, ಈಗ ಸರ್ಕಾರ ಅನ್ಲಾಕ್ ಮಾಡಿದ್ದು, ಕೆಲವು ಕೋವಿಡ್ ನಿಯಮಗಳನ್ನನುಸರಿಸುವ ಮೂಲಕ ಇಂದಿನಿಂದ ನಾಗರಹೊಳೆಗೆ ಪ್ರವಾಸಿಗರು ಭೇಟಿ ನೀಡಲು ಅಧಿಕೃತವಾಗಿ ಅನುಮತಿ ನೀಡಲಾಗಿದೆ.
ಅರಣ್ಯ ಮತ್ತು ವನ್ಯಜೀವಿಗಳ ಮೇಲೆ ಒತ್ತಡ ಕಡಿಮೆ ಮಾಡಲು ಹಾಗೂ ಸಫಾರಿ ನೆಪದಲ್ಲಿ ಕೆಲ ಪ್ರವಾಸಿಗರು ಕಾಡಿನಲ್ಲೇ ಅಡ್ಡಾಡುವ ಪ್ರವೃತ್ತಿಗೆ ಕಡಿವಾಣ ಹಾಕಲು 3 ವರ್ಷದ ಹಿಂದೆ ವೀರನಹೊಸಹಳ್ಳಿ ಹಾಗೂ ನಾಣಚ್ಚಿಗೇಟ್ ನಿಂದ ಸಫಾರಿ ಆರಂಭಿಸಲಾಗಿತ್ತು. ಆದರೆ, ಕೊರೊನಾ ಹಿನ್ನಲೆ ಮಾರ್ಚ್ ನಲ್ಲಿ ನಾಗರಹೊಳೆ ಸೇರಿದಂತೆ ಎಲ್ಲಾ ಕಡೆ ಸಫಾರಿ ಬಂದ್ ಆಗಿತ್ತು. ಸದ್ಯ ನಾಗರಹೊಳೆಯಲ್ಲಿ ಇಂದಿನಿಂದ ಸಫಾರಿ ಆರಂಭವಾಗಿದೆ.
ಸಫಾರಿ ಸಮಯ:
ಬೆಳಿಗ್ಗೆ 6 ರಿಂದ 7.30 ಹಾಗೂ ಮಧ್ಯಾಹ್ನ 2 ರಿಂದ 3.30 ರ ಸಮಯದಲ್ಲಿ ಮಾತ್ರ ಟಿಕೆಟ್ ನೀಡಲಾಗುವುದು. ಬೆಳಿಗ್ಗೆ 6 ರಿಂದ 7.30 ಗಂಟೆ, ಎರಡನೇ ಟ್ರಿಪ್ 7,30 ರಿಂದ 9 ಗಂಟೆ, ಮೂರನೇ ಟ್ರಿಪ್ ಮಧ್ಯಾಹ್ನ 2 ರಿಂದ 4 ಗಂಟೆ, ನಾಲ್ಕನೇ ಟ್ರಿಪ್ ಸಂಜೆ 4 ರಿಂದ 5,30 ವರೆಗೆ ಸಫಾರಿ ಆಯೋಜಿಸಲಾಗಿದೆ.
ಒಂದು ಟ್ರಿಪ್ ನಲ್ಲಿ 25 ಜನ ಪ್ರವಾಸಿಗರಿಗೆ ಅವಕಾಶ ಇದ್ದು , ಆನ್ ಲೈನ್ ನಲ್ಲಿ 12 ಟಿಕೆಟ್ ಹಾಗೂ ಆಫ್ ಲೈನ್ ನಲ್ಲಿ 13 ಪ್ರವಾಸಿಗರಿಗೆ ಮಾತ್ರ ಟಿಕೆಟ್ ವಿತರಣೆ ಮಾಡಲಾಗುವುದು. ನಿತ್ಯ 4 ಟ್ರಿಪ್ ಇರುತ್ತದೆ, ಪ್ರತಿದಿನ ಒಟ್ಟು 100 ಪ್ರವಾಸಿಗರಿಗೆ ಮಾತ್ರವೇ ಅವಕಾಶವಿರುತ್ತದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಕೋವಿಡ್ ನಿಯಮಗಳನ್ನು ಕಡ್ಡಾಯ ಮಾಡಲಾಗಿದ್ದು, ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಬೇಕು ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದ್ದಾರೆ