ಮೈಸೂರು : "ಮಹಿಷ ದಸರಾ ಆಚರಣೆಗೆ ಯಾರದೇ ಅನುಮತಿ ಬೇಕಿಲ್ಲ. ಸಂವಿಧಾನದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶವಿದೆ. ಅದರಂತೆ ಮಹಿಷಾ ದಸರಾಚರಣೆ ಮಾಡುತ್ತೇವೆ. ರಕ್ಷಣೆಯ ದೃಷ್ಟಿಯಿಂದ ಜಿಲ್ಲಾಡಳಿತ, ನಗರ ಪೊಲೀಸ್ ಕಮಿಷನರ್ ಹಾಗೂ ಪಾಲಿಕೆಗೆ ಮನವಿ ಪತ್ರ ಸಲ್ಲಿಸಲಾಗಿದೆ" ಎಂದು ಮಹಿಷಾ ದಸರಾ ಸಮಿತಿಯ ಅಧ್ಯಕ್ಷ ಹಾಗು ಮಾಜಿ ಮೇಯರ್ ಪುರುಷೋತ್ತಮ್ ಈಟಿವಿ ಭಾರತ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
"ಅಕ್ಟೋಬರ್ 13 ರ ಬೆಳಗ್ಗೆ 9 ಗಂಟೆಗೆ 1 ಸಾವಿರ ಸ್ಕೂಟರ್ ಮೂಲಕ ರ‍್ಯಾಲಿಯಲ್ಲಿ ತೆರಳಿ ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ಆ ನಂತರ ಬೆಟ್ಟದ ಕೆಳಭಾಗದ ತಾವರೆಕಟ್ಟೆ ಬಳಿ ಮಹಿಷಾಸುರನ ಎರಡು ಟ್ಯಾಬ್ಲೋ, ರಥ ಹಾಗೂ ಸಮಾಜ ಸುಧಾರಕರಾದ ಕುವೆಂಪು, ವಾಲ್ಮಿಕಿ, ಮೈಸೂರು ಒಡೆಯರ್ ಸೇರಿದಂತೆ ಇತರ ಮಹಾನುಭಾವರ ಭಾವಚಿತ್ರಗಳನ್ನು ಮಹಿಷಾ ರಥದಲ್ಲಿರಿಸಿಕೊಂಡು, ಸಾಂಸ್ಕೃತಿಕ ಕಲಾತಂಡಗಳೊಂದಿಗೆ ನಗರದ ಟೌನ್‌ಹಾಲ್‌ವರೆಗೆ ಮೆರವಣಿಗೆ ನಡೆಸಲಾಗುತ್ತದೆ. ಟೌನ್‌ಹಾಲ್‌ನಲ್ಲಿ ಸುಮಾರು 10 ಸಾವಿರ ಜನ ಸೇರುವ ನಿರೀಕ್ಷೆ ಇದೆ" ಎಂದರು.
"ದಸರಾಗೆ ಮಹಿಷ ದಸರಾ ಪರ್ಯಾಯ ದಸರಾವೂ ಅಲ್ಲ. ಕಳೆದ 9 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದೇವೆ. 2014 ರಿಂದ 2018 ವರೆಗೆ ಮಹಿಷ ಆಚರಣೆಯನ್ನು ಚಾಮುಂಡಿ ಬೆಟ್ಟದಲ್ಲೇ ಮಾಡಿದ್ದೇವೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಚಾಮುಂಡಿ ಬೆಟ್ಟದ ಮಹಿಷ ಪ್ರತಿಮೆಯ ಮುಂದೆ ಆಚರಣೆ ಮಾಡಲು ಅನುಮತಿ ನೀಡಿರಲಿಲ್ಲ. ಆದ್ದರಿಂದ ಮೈಸೂರು ನಗರದಲ್ಲೇ ಆಚರಣೆ ಮಾಡಿದೆವು. ಈ ವರ್ಷ ಜಿಲ್ಲಾ ಉಸ್ತುವಾರಿ ಸಚಿವರೇ ಸಂವಿಧಾನದಲ್ಲೇ ಧಾರ್ಮಿಕ ಸ್ವಾತಂತ್ರ್ಯ ಇರುವುದರಿಂದ ಮಹಿಷ ದಸರಾಚರಣೆಗೆ ನನ್ನದೇನೂ ತಕರಾರಿಲ್ಲ. ಸಂವಿಧಾನದ ಆಶಯದಂತೆ ನೀವು ಕೂಡ ಆಚರಣೆ ಮಾಡಬಹುದು ಎಂದು ಹೇಳಿದ್ದಾರೆ" ಎಂದು ಪುರುಷೋತ್ತಮ್ ವಿವರಿಸಿದರು. "ಮಹಿಷ ದಸರಾ ಆಚರಣೆಗೆ ಎಲ್ಲಾ ಸಿದ್ದತೆ ಆಗಿದೆ. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳಿಂದ ಸಾಹಿತಿಗಳು, ಚಿಂತಕರು ಆಗಮಿಸಲಿದ್ದಾರೆ" ಎಂದರು
ಸಂಸದರ ವಿರೋಧವೇಕೆ ಗೊತ್ತಿಲ್ಲ: "ಮಹಿಷ ದಸರಾ ದೆವ್ವದ ಕಲ್ಪನೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ಸರಿಯಲ್ಲ. ಇದು ಇತಿಹಾಸಕ್ಕೆ ಮಾಡಿದ ಅವಮಾನ. ಮಹಿಷನ ಇತಿಹಾಸ ಪ್ರತಾಪ್ ಸಿಂಹ ಅವರಿಗೆ ಗೊತ್ತಿಲ್ಲ. ಮಹಿಷಾಸುರ ರಾಕ್ಷಸ ಎಂದು ಎಲ್ಲೂ ಉಲ್ಲೇಖ ಇಲ್ಲ. ಅವರು ಚಾಮುಂಡೇಶ್ವರಿ ತಾಯಿಯ ಪೂಜೆ ಮಾಡಲಿ, ಅದಕ್ಕೆ ವಿರೋಧ ಇಲ್ಲ" ಎಂದು ಹೇಳಿದರು.
"ರಾಜಕೀಯ ಕಾರಣಕ್ಕಾಗಿ ಪ್ರತಾಪ್ ಸಿಂಹ ಮಹಿಷ ದಸರಾ ವಿರೋಧಿಸುತ್ತಿದ್ದಾರೆ. ಮಹಿಷಾ ದಸರಾ ತಡೆಗೆ ಸಂಘರ್ಷಕ್ಕೂ ಸಿದ್ದ ಎಂಬ ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಲ್ಲ. ಅವರು ಚಾಮುಂಡಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ನಾವು ಸಹ ಶಾಂತಿಯುತವಾಗಿ ಮಹಿಷ ದಸರಾ ಆಚರಣೆ ಮಾಡುತ್ತೇವೆ" ಎಂದು ಪುರುಷೋತ್ತಮ್ ತಿಳಿಸಿದರು.
ಇದನ್ನೂ ಓದಿ: ಅಕ್ಟೋಬರ್ 13ರಂದು ಮಹಿಷಾ ದಸರಾ ಆಚರಣೆ : ಸಮಿತಿ ಸದಸ್ಯ ಪುರುಷೋತ್ತಮ್