ಮೈಸೂರು: ಶರನ್ನವರಾತ್ರಿಯ ಮೊದಲ ದಿನ ಅಂಬಾ ವಿಲಾಸ ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಪೂಜೆ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಖಾಸಗಿ ದರ್ಬಾರ್ ನಡೆಯಿತು. ಯದುವೀರ್ ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ನಂತರ ಸಿಂಹಾಸನದಲ್ಲಿ ಆಸೀನರಾಗಿ ಖಾಸಗಿ ದರ್ಬಾರ್ ಕೈಗೊಂಡರು. ಖಾಸಗಿ ದರ್ಬಾರ್ ಗತಕಾಲದ ವೈಭವ ನೆನಪಿಸಿತು.
ಧಾರ್ಮಿಕ ಕೈಂಕರ್ಯಗಳು: ಅರಮನೆಯಲ್ಲಿ ಬೆಳಿಗ್ಗೆಯಿಂದಲೇ ಸಾಂಪ್ರದಾಯಿಕ ಶರನ್ನವರಾತ್ರಿಯ ಪೂಜೆಗಳು ಆರಂಭವಾದವು. 6ರಿಂದ 6.25ರ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಯಿತು. ನಂತರ ಗಣಪತಿ ಹೋಮ ಸೇರಿದಂತೆ ಹಲವು ಹೋಮಗಳು ನೆರವೇರಿದವು. 7.05ರಿಂದ 07.45ರ ನಡುವೆ ಯದುವೀರ್ ಒಡೆಯರ್ ಹಾಗೂ ರಿಷಿಕಾ ಒಡೆಯರ್ ಅವರಿಗೆ ಕಂಕಣ ಧಾರಣೆಯಾಯಿತು. ಇದಕ್ಕೂ ಮೊದಲು ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸುವಿಗೆ ಆನೆ ಬಾಗಿಲಿನಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ನವರಾತ್ರಿಯ ಪೂಜೆಗಳು ರಾಜ ಪರಂಪರೆಯಂತೆ ನೆರವೇರಿದವು. ಮಧ್ಯಾಹ್ನ 01.45ರಿಂದ 02.05ರವರೆಗೆ ತಾಯಿ ಚಾಮುಂಡೇಶ್ವರಿ ದೇವಿಯನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ರವಾನಿಸಲಾಯಿತು.
ಹಿಂದೆ ರಾಜ ಮಹಾರಾಜರು ನಡೆಸುತ್ತಿದ್ದ ದರ್ಬಾರ್ ಮಾದರಿಯಲ್ಲೇ ಇಂದಿಗೂ ದಸರಾ ಸಂದರ್ಭದಲ್ಲಿ ಸಂಪ್ರದಾಯ ಬದ್ಧವಾಗಿ ಅರಮನೆಯಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸಿಕೊಂಡು ಬರುತ್ತಿದ್ದಾರೆ. 8ನೇ ಬಾರಿ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ನಡೆಸಿದರು. ರಾಜ ಪೋಷಾಕು ಧರಿಸಿನಲ್ಲಿ ಅವರು ದರ್ಬಾರ್ ಹಾಲ್ ಪ್ರವೇಶಿಸುತ್ತಿದ್ದಂತೆ ಬಹು ಪರಾಕ್ ಕೂಗಲಾಯಿತು. ಸಿಂಹಾಸನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿದ ಯದುವೀರ್, ಪೂಜೆ ಸಲ್ಲಿಸಿ ಮಂಗಳಾರತಿ ಬೆಳಗಿದರು. ಸಿಂಹಾಸನದ ಪಕ್ಕದಲ್ಲೇ ಕುಳಿತು ನವಗ್ರಹ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿದರು. ಇದಾದ ನಂತರ ಸಿಂಹಾಸನಾರೂಢರಾದರು.
ಪತ್ನಿ ತ್ರಿಷಿಕಾ ಕುಮಾರಿ ಯದುವೀರ್ ಅವರು ಪತಿಯ ಪಾದಗಳಿಗೆ ಪುಷ್ಪಾರ್ಚನೆ ಮಾಡಿದರು. ಪುತ್ರ ಆಧ್ಯವೀರ್ ಪಕ್ಕದಲ್ಲೇ ಇದ್ದರು. ದಿವಾನರು ಸಿಂಹಾಸನದ ಮುಂದೆ ನಿಂತು ನಡುಬಾಗಿ ವಂದಿಸಿದರು. ಇದಾದ ನಂತರ ಅರಮನೆಯ ದೇವಸ್ಥಾನಗಳು, ಚಾಮುಂಡಿ ಬೆಟ್ಟ, ನಂಜನಗೂಡು ನಂಜುಡೇಶ್ವರ, ಮಲೆಮಹದೇಶ್ವರ ಬೆಟ್ಟ ಸೇರಿದಂತೆ ಹಲವು ದೇವಸ್ಥಾನಗಳಿಂದ ತಂದಿದ್ದ ಪ್ರಸಾದವನ್ನು ಯದುವೀರ್ ಅವರಿಗೆ ನೀಡಲಾಯಿತು. ಮೈಸೂರು ರಾಜ್ಯ ಗೀತೆ ನುಡಿಸಲಾಯಿತು. ಸಿಂಹಾಸನದ ಮೇಲೆ ನಿಂತ ಯದುವೀರರು ಸೆಲ್ಯೂಟ್ ಮಾಡಿ ರಾಜ್ಯ ಗೀತೆಗೆ ಗೌರವ ಸಲ್ಲಿಸಿದರು. ರಾಜ್ಯಗೀತೆ ಮುಗಿದ ನಂತರ ಸಿಂಹಾಸನದಿಂದ ಇಳಿದು ಖಾಸಗಿ ದರ್ಬಾರ್ ಮುಕ್ತಾಯಗೊಳಿಸಿದರು. ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಆಶೀರ್ವಾದ ಪಡೆದರು.
ಚಾಮುಂಡಿ ಬೆಟ್ಟದಲ್ಲಿ ದಸರಾಗೆ ಚಾಲನೆ: ಮತ್ತೊಂದೆಡೆ, ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಾಂಪ್ರದಾಯಿಕ ದಸರಾಗೆ ವಿಧ್ಯುಕ್ತ ಚಾಲನೆ ನೀಡಲಾಯಿತು. ವೇದಿಕೆ ಕಾರ್ಯಕ್ರಮದಲ್ಲಿ ಬೆಳಿಗ್ಗೆ 10.15ರಿಂದ 10.36ರ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆಯ ಮೂಲಕ ದಸರಾ ಉದ್ಘಾಟಕರಾದ ಸಂಗೀತ ನಿರ್ದೇಶಕ ಹಂಸಲೇಖ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಇತರ ಗಣ್ಯರು ಚಾಲನೆ ಕೊಟ್ಟರು.
ಸಿಎಂ ಮಾತನಾಡಿ, ''ದಸರಾ ಹಬ್ಬ ವಿಜಯನಗರ ಸಾಮ್ರಾಜ್ಯದ ಆಚರಣೆಯಾಗಿತ್ತು. ವಿಜಯನಗರ ಸಾಮ್ರಾಜ್ಯ ವೈಭವಯುತವಾಗಿತ್ತು. ಈ ಸಾಮ್ರಾಜ್ಯದಲ್ಲಿ ಮುತ್ತು, ರತ್ನಗಳನ್ನು ಸೇರು ಬಳ್ಳಗಳಲ್ಲಿ ಅಳೆದು ಮಾರಾಟ ಮಾಡುತ್ತಿದ್ದರು. ಮೈಸೂರು ಅರಸರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಪತನಾ ನಂತರ ಮೈಸೂರು ಅರಸರು ದಸರಾ ಹಬ್ಬವನ್ನು ಆಚರಣೆ ಮಾಡಲು ಪ್ರಾರಂಭಿಸಿದರು. ಈಗ ಆ ಆಚರಣೆಯನ್ನು ಸರ್ಕಾರ ಮಾಡುತ್ತಿದೆ. ನಾವು ದಸರಾ ಹಬ್ಬವನ್ನು ನವರಾತ್ರಿ ಹಬ್ಬ ಎಂದು ಕರೆಯುತ್ತೇವೆ. 10ನೇ ದಿನ ಜಂಬೂ ಸವಾರಿ ನಡೆಯುತ್ತದೆ'' ಎಂದು ವಿವರಿಸಿದರು.
ಇದನ್ನೂ ಓದಿ: ಕನ್ನಡ ನಮ್ಮ ಶೃತಿ ಆಗಬೇಕು, ಅದರ ಅಭಿವೃದ್ಧಿ ಕೃತಿ ಆಗಬೇಕು: ಹಂಸಲೇಖ ದಸರಾ ಉದ್ಘಾಟನಾ ಭಾಷಣ