ಮೈಸೂರು: ನಾಲ್ಕನೇ ಬಾರಿಗೆ ತಾಯಿ ಶ್ರೀ ಚಾಮುಂಡೇಶ್ವರಿಯ ಆಶೀರ್ವಾದದಿಂದ ವಿಜಯದಶಮಿ ಮೆರವಣಿಗೆ (ಜಂಬೂಸವಾರಿ) ಸರಾಗವಾಗಿ ನಡೆಯಿತು. ಚಾಮುಂಡೇಶ್ವರಿ ತಾಯಿ ನಮ್ಮೊಂದಿಗೆ ಇರುವವರೆಗೂ ಏನೂ ತೊಂದರೆ ಆಗುವುದಿಲ್ಲ ಎಂದು ಅಭಿಮನ್ಯು ಆನೆಯ ಮಾವುತ ವಸಂತ್ ಹೇಳಿದರು. ಜಂಬೂಸವಾರಿ ಮೆರವಣಿಗೆ ಯಶಸ್ವಿಯಾಗಿ ಮುಗಿದು, ಅಭಿಮನ್ಯು ನೇತೃತ್ವದ 14 ಆನೆಗಳು ಗುರುವಾರ ಮರಳಿ ಕಾಡಿಗೆ ತೆರಳಿವೆ. ಈ ಸಂದರ್ಭದಲ್ಲಿ ವಸಂತ್, ಈಟಿವಿ ಭಾರತ್ ಪ್ರತಿನಿಧಿ ಮಹೇಶ್ ಅವರಿಗೆ ಮಾತಿಗೆ ಸಿಕ್ಕರು.
ಜಂಬೂಸವಾರಿ ಮೆರವಣಿಗೆ ಯಶಸ್ವಿಯಾಗಿ ನಡೆದಿದ್ದು ಬಹಳ ಖುಷಿಯಾಗಿದೆ. ಅಭಿಮನ್ಯುವಿನ ಕೆಲಸದ ಬಗ್ಗೆ ಹೇಳುವುದಕ್ಕೆ ಮಾತೇ ಸಾಲದು. ಇದು ಆತನಿಗೆ ನಾಲ್ಕನೇ ಬಾರಿ ಜಂಬೂಸವಾರಿ. ವೈಭವದ ಮೆರವಣಿಗೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾನೆ. ಇದೆಲ್ಲಾ ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಡೆದಿದೆ. ನಮಗೆ ಯಾವುದೇ ಸವಾಲು ಅಂತ ಅನ್ನಿಸಲಿಲ್ಲ. ನಮ್ಮೊಂದಿಗೆ ಚಾಮುಂಡೇಶ್ವರಿ ತಾಯಿ ಇರುವವರೆಗೆ ಏನೂ ಆಗುವುದಿಲ್ಲ. ನನಗೆ ಸಿಕ್ಕ ಈ ಅವಕಾಶಕ್ಕೆ ಚಾಮುಂಡೇಶ್ವರಿ ತಾಯಿ ಕಾರಣ. ಆ ತಾಯಿಗೆ ಶಿರಭಾಗಿ ನಮಿಸುತ್ತೇನೆ ಎಂದರು.
25 ವರ್ಷಗಳಿಂದ ನಾನು ದಸರಾದಲ್ಲಿ ಭಾಗವಹಿಸುತ್ತಿದ್ದೇನೆ. ಮೊದಲು ಜಂಬೂಸವಾರಿ ಮೆರವಣಿಗೆಯಲ್ಲಿ ಅಭಿಮನ್ಯು ಗಾಡಿ ಆನೆಯಾಗಿ, ನಂತರ ಛತ್ರಿ ಆನೆಯಾಗಿ ಕೆಲಸ ಮಾಡಿದ್ದಾನೆ. ಅಭಿಮನ್ಯು ಹುಲಿ ಸೆರೆ ಕಾರ್ಯಾಚರಣೆಯಲ್ಲೂ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದಾನೆ. ನನಗೆ ನನ್ನ ತಂದೆ ದೇವರ ಸಮಾನ. ಅವರು ಪಳಗಿಸಿದ ಆನೆಯೇ ಈ ಅಭಿಮನ್ಯು. ಅವರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತಿದ್ದೇನೆ ಎಂದು ತಿಳಿಸಿದರು.
ಚಿಕ್ಕಂದಿನಲ್ಲಿ ನಾನು ಚಪ್ಪಾಳೆ ಹೊಡೆಯುತ್ತಿದ್ದೆ. ಅಪ್ಪನೊಂದಿಗೆ ದಸರಾ ಸೊಬಗು ನೋಡಲು ಬಂದಾಗ ನಾನಿನ್ನೂ ಚಿಕ್ಕವನು. ಆಗ ನಾನು ಸಂಭ್ರಮದ ದಸರಾ ನೋಡಿ ಚಪ್ಪಾಳೆ ಹೊಡೆಯುತ್ತಿದ್ದೆ ಅಷ್ಟೇ. ನನಗೆ ಅಷ್ಟೊಂದು ಅನುಭವ ಇರಲಿಲ್ಲ. ಆ ನಂತರದಲ್ಲಿ ತಂದೆಯ ಬಳಿಕ ನಾನು ಅಭಿಮನ್ಯು ಆನೆಯನ್ನು ನೋಡಿಕೊಳ್ಳುತ್ತಿದ್ದೇನೆ ಎಂದು ನೆನಪುಗಳನ್ನು ಮೆಲುಕು ಹಾಕಿದರು.
ಈ ಸಲ ಜಂಬೂಸವಾರಿ ಕಟ್ಟುವಾಗ ಸ್ವಲ್ಪ ಹೆಚ್ಚು ಕಡಿಮೆ ಆಯಿತು. ಆದರೆ ಅಭಿಮನ್ಯು ತನ್ನ ಬೆನ್ನಿನ ಮೇಲೆ ಅಂಬಾರಿ ಕಟ್ಟಿದ ನಂತರ, ತನಗೆ ಹೇಗೆ ಬೇಕೋ ಹಾಗೆ ಅಂಬಾರಿಯನ್ನು ಬ್ಯಾಲೆನ್ಸ್ ಮಾಡಿಕೊಂಡು, ಸುಸೂತ್ರವಾಗಿ ಮೆರವಣಿಗೆ ಮುಗಿಸಿದ ಎಂದು ಹೇಳುತ್ತಾ ವಸಂತ ನಿರಾಳರಾದರು.
ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ವಾರ್ಷಿಕ ರಥೋತ್ಸವಕ್ಕೆ ಚಾಲನೆ ನೀಡಿದ ರಾಜ ವಂಶಸ್ಥರು