ಮೈಸೂರು: ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ,ಈ ಜಂಬೂಸವಾರಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಇರಿಸಿ ಪುಷ್ಪಾರ್ಚನೆ ಮಾಡಲಾಗುತ್ತದೆ. ಅದಕ್ಕೂ ಮೊದಲು ಇಂದು ಬೆಳಗ್ಗೆ ಶುಭ ಲಗ್ನದಲ್ಲಿ ಇದೇ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದ ಮೇಲೆ ಇಟ್ಟು ಗಣ್ಯರು ಪುಷ್ಪಾರ್ಚನೆ ಮಾಡಿ ನಾಡಹಬ್ಬಕ್ಕೆ ದಸರಾಗೆ ಚಾಲನೆ ನೀಡಿಲಾಗಿದೆ.
ಉತ್ಸವ ಮೂರ್ತಿಯ ಹಿನ್ನೆಲೆ
ಮೈಸೂರು ಅರಸರ ಆಳ್ವಿಕೆಯ ಅಂತ್ಯದ ದಿನಗಳ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಜಯಚಾಮರಾಜ ಒಡೆಯರ್ ಅವರು ಚಿನ್ನದ ಅಂಬಾರಿಯಲ್ಲಿ ಕುಳಿತು ಸಾಗುತ್ತಿದ್ದರು, ನಂತರ ಅಂಬಾರಿಯಲ್ಲಿ ಭುವನೇಶ್ವರಿ ವಿಗ್ರಹವನ್ನಿಟ್ಟು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿತ್ತು. ನಂತರ ದೇವಾಲಯದ ಆಡಳಿತ ಮಂಡಳಿ ಸರ್ಕಾರದ ವತಿಯಿಂದಲೇ ಮೈಸೂರಿನ ಹೆಸರಾಂತ ಶಿಲ್ಪಿಯಿಂದ 1990ರಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಸಿದ್ದಪಡಿಸಲಾಯಿತು.
ಈ ಉತ್ಸವ ಮೂರ್ತಿ ಶಕ್ತಿ ಸ್ವರೂಪಿಣಿ ಮೂರ್ತಿಯಾಗಿದ್ದು, ಮಹಿಷಾಸುರ ಮರ್ಧಿನಿ ಅವತಾರದಲ್ಲಿರುವ ಈ ಉತ್ಸವ ಮೂರ್ತಿ ಎರಡೂವರೆ ಅಡಿ ಎತ್ತರವಿದ್ದು, 8 ಕೈಗಳನ್ನು ಹೊಂದಿದೆ. ಹಾಗೂ ದೇವಿಯ ಪಾದದಡಿ ಮಹಿಷಾಸುರನ ದೇಹವಿದೆ. ಈ ಉತ್ಸವ ಮೂರ್ತಿಯನ್ನು ಚಿನ್ನದ ಅಂಬಾರಿಯೊಳಗೆ ಇಟ್ಟು ಮೆರವಣಿಗೆ ಮಾಡಿ ಪೂಜಿಸಲಾಗುತ್ತದೆ.
ಇದೇ ಸಂಪ್ರದಾಯ ದಶಕಗಳಿಂದ ನಡೆದುಕೊಂಡು ಬರುತ್ತಿದ್ದು, ಮೈಸೂರು ದಸರಾವೀಗ ವಿಶ್ವ ವಿಖ್ಯಾತಿಗಳಿಸಿದೆ.