ಮೈಸೂರು: ಸಂಜೆ 6.30ರ ನಂತರ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ವಿದ್ಯಾರ್ಥಿನಿಯರು ತಿರುಗಾಡುವಂತಿಲ್ಲ ಎಂಬ ಆದೇಶಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಮೈಸೂರು ವಿಶ್ವವಿದ್ಯಾಲಯದ ಕಡೆಯಿಂದ ಪರಿಷ್ಕೃತ ಆದೇಶ ಹೊರಬಿದ್ದಿದೆ.
ಮೈಸೂರಿನಲ್ಲಿ ಆ. 24ರಂದು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಕುಕ್ಕರಹಳ್ಳಿ ಕೆರೆ ಮತ್ತು ಮಾನಸಗಂಗೋತ್ರಿ ಆವರಣದಲ್ಲಿ ಸಂಜೆ 6.30ರ ನಂತರ ಹೆಣ್ಣುಮಕ್ಕಳು ಒಂಟಿಯಾಗಿ ತಿರುಗಾಡುವುದು, ಕೂರುವುದನ್ನು ನಿಷೇಧಿಸಿ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರು ಸುತ್ತೋಲೆ ಹೊರಡಿಸಿದ್ದರು.
ಇದನ್ನೂ ಓದಿ: ಮೈಸೂರು ವಿವಿ ವಿದ್ಯಾರ್ಥಿನಿಯರು ಒಂಟಿಯಾಗಿ ತಿರುಗಾಡುವಂತಿಲ್ಲ: ಸುತ್ತೋಲೆ
ಆದರೆ ಈ ಬಗ್ಗೆ ಎಲ್ಲೆಡೆ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆದೇಶವನ್ನು ಪರಿಷ್ಕರಿಸಲಾಗಿದ್ದು, ವಿಶ್ವವಿದ್ಯಾಲಯದ ಆವರಣದಲ್ಲಿ ಸಂಜೆ ನಂತರ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗಿದೆ. ಯಾವುದೇ ವ್ಯಕ್ತಿಯ ಸಂಜೆ 6.30ರ ನಂತರ ಪ್ರವೇಶಿಸುವುದನ್ನು ಸುರಕ್ಷತಾ ದೃಷ್ಟಿ ಹಾಗೂ ಮುನ್ನಚ್ಚರಿಕೆ ಕ್ರಮವಾಗಿ ನಿಷೇಧಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿನ ಭದ್ರತಾ ಅಧಿಕಾರಿಗಳು ಪ್ರತಿದಿನ ಸಂಜೆ 6ರಿಂದ ಬೆಳಿಗ್ಗೆ 9ರವರಗೆ ಗಸ್ತು ತಿರುಗಲು ಭದ್ರತಾ ಸಿಬ್ಬಂದಿ ನಿಯೋಜಿಸಲಾಗುವುದು. ಮಾನಸಗಂಗೋತ್ರಿ ಆವರಣದಲ್ಲಿಯೂ ಸಹ ಸಂಜೆ ನಂತರ ವಿದ್ಯಾರ್ಥಿಗಳು ಸುರಕ್ಷತೆಯ ದೃಷ್ಟಿಯಿಂದ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಈ ವಿಚಾರವಾಗಿ ಈ ಹಿಂದೆ ಹೊರಡಿಸಲಾಗಿದ್ದ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಆರೋಪಿಗಳು ಮೈಸೂರಿಗೆ ಬಂದಿದ್ದೇಕೆ? ರೇಪ್ ಎಸಗಿದ್ದು ಯಾಕೆ? ಚಾಮುಂಡಿ ಬೆಟ್ಟದ ಬಳಿ ನಡೆದ ಆ ಘೋರ ಕೃತ್ಯದ ಕಂಪ್ಲೀಟ್ ಡಿಟೇಲ್ಸ್