ಮೈಸೂರು : ವಾರಾಂತ್ಯದ ಕರ್ಫ್ಯೂನಿಂದ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ಹಾಗಾಗಿ, ಕೂಡಲೇ ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ವ್ಯಾಪಾರಸ್ಥರು ತಮ್ಮ ಅಂಗಡಿಗಳ ಮುಂದೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು.
ನಗರದ ಪ್ರಮುಖ ವ್ಯಾಪಾರಿ ಸ್ಥಳಗಳಾದ ದೇವರಾಜ ಅರಸು ರಸ್ತೆ, ಶಿವಾರಾಂ ಪೇಟೆ ಸೇರಿದಂತೆ ಪ್ರಮುಖ ವ್ಯಾಪಾರಿ ಸ್ಥಳಗಳಲ್ಲಿ ಇಂದು ಮತ್ತು ನಾಳೆ ವೀಕೆಂಡ್ ಕರ್ಫ್ಯೂ ಇದೆ. ಇದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಮುಂದಿನ ವಾರದಿಂದ ವೀಕೆಂಡ್ ಕರ್ಫ್ಯೂ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ 'ಈಟಿವಿ ಭಾರತ್' ಜೊತೆ ಮಾತನಾಡಿದ ವರ್ತಕರ ಸಂಘದ ಕಾರ್ಯದರ್ಶಿ ಮಹೇಂದ್ರ ಜೈನ್, ಕೊರೊನಾದ ಮೊದಲ ಮತ್ತು ಎರಡನೇ ಅಲೆ ಮುಗಿದಿದೆ. ಮೂರನೇ ಅಲೆ ಬರಬಾರದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ 8 ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಲಾಕ್ಡೌನ್ನಿಂದ ಕೊರೊನಾ ಕಡಿಮೆ ಮಾಡಲು ಸಾಧ್ಯವಿಲ್ಲ.
ಇದನ್ನೂ ಓದಿ:ಗುಜರಾತ್ ಸಿಎಂ ಭೇಟಿ ಮಾಡಿದ ಲಕ್ಷ್ಮಿ ಮಿತ್ತಲ್: ರಾಜ್ಯದಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆಗೆ ನಿರ್ಧಾರ
ಎಲ್ಲವನ್ನೂ ತೆರೆದು ಕೇವಲ ತೆರಿಗೆ ಕಟ್ಟುವ ಅಂಗಡಿಗಳನ್ನು ಮುಚ್ಚಿದರೆ ಹೇಗೆ? ಇದರಿಂದ ಕೊರೊನಾ ಕಡಿಮೆಯಾಗುವುದಿಲ್ಲ. ಮೈಸೂರಿನಲ್ಲಿ ಕೋವಿಡ್ ಶೇ.1ಕ್ಕಿಂತ ಕಡಿಮೆಯಿದೆ. ಹೀಗಾಗಿ, ಮುಂದಿನ ವಾರದಿಂದ ದಯವಿಟ್ಟು ವೀಕೆಂಡ್ ಕರ್ಫ್ಯೂ ಸಡಿಲಗೊಳಿಸಿ, ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.