ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಜಿಲ್ಲಾಡಳಿತದಿಂದ ಮೈಸೂರು ರೇಷ್ಮೆ ಸೀರೆಯನ್ನ ಗಿಫ್ಟ್ ನೀಡಲಾಗಿತ್ತು. ಈ ಸೀರೆಯನ್ನೇ ಉಟ್ಟುಕೊಂಡು ದಸರಾ ಉದ್ಘಾಟನೆಗೆ ರಾಷ್ಟ್ರಪತಿ ಬಂದಿದ್ದರು. ಬಳಿಕ ತಾಯಿ ಚಾಮುಂಡೇಶ್ವರಿಗೆ ಮಂಗಳಾರತಿ ಮಾಡಿ, ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ಮೈಸೂರು ದಸರಾಗೆ ಚಾಲನೆ ನೀಡಿದರು.
![Mysore silk saree gift](https://etvbharatimages.akamaized.net/etvbharat/prod-images/kn-mys-01-rastrapathi-silk-vis-ka10003_26092022113542_2609f_1664172342_811.jpg)
ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ರಾಷ್ಟ್ರಪತಿಗಳ ಭವನಕ್ಕೆ ಸಚಿವರು ತೆರಳಿದ ಸಂದರ್ಭದಲ್ಲಿ ಮೈಸೂರು ಸಿಲ್ಕ್ ಸೀರೆಯನ್ನು ಉಡುಗೊರೆಯನ್ನಾಗಿ ನೀಡಲಾಗಿತ್ತು. ವಿಶೇಷವೆಂದರೆ ಉಡುಗೊರೆ ನೀಡಿದ್ದ ಸುಮಾರು 70 ಸಾವಿರ ರೂ. ಬೆಲೆಯ ಮೈಸೂರು ರೇಷ್ಮೆ ಸೀರೆಯನ್ನುಟ್ಟುಕೊಂಡೇ ಸಾಂಸ್ಕೃತಿಕ ನಗರಿಗೆ ಆಗಮಿಸಿದ ರಾಷ್ಟ್ರಪತಿಗಳು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ದಸರಾ ಮಹೋತ್ಸವವನ್ನು ಉದ್ಘಾಟಿಸಿದರು.
![Mysore silk saree gift](https://etvbharatimages.akamaized.net/etvbharat/prod-images/16475296_-bin.jpg)
ರಾಷ್ಟ್ರಪತಿಯವರು ಬಿಳಿ ಸೀರೆ ಇಷ್ಟಪಡುತ್ತಾರೆ ಎಂಬುದನ್ನು ಅರಿತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಿ ಸ್ವಾಮ್ಯದ ಕೆ.ಎಸ್.ಐ.ಸಿ.ಯ ಸರ್ಕಾರಿ ರೇಷ್ಮೆ ಕಾರ್ಖಾನೆಗೆ ಈ ಉಡುಪು ತಯಾರಿಕೆಗೆ ಆದೇಶ ನೀಡಿದ್ದರು. ಮೈಸೂರಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1912ರಲ್ಲಿ ನಿರ್ಮಿಸಿದ ರೇಷ್ಮೆ ಕಾರ್ಖಾನೆ ಎಂಬ ಹೆಮ್ಮೆ ಈ ಕಾರ್ಖಾನೆಗೆ ಇದೆ.
ಇದನ್ನೂ ಓದಿ: ವಿಶ್ವವಿಖ್ಯಾತ 'ಮೈಸೂರು ದಸರಾ' ಮಹೋತ್ಸವ.. ರಾಷ್ಟ್ರಪತಿಯಿಂದ ವಿದ್ಯುಕ್ತ ಚಾಲನೆ
ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಷ್ಟಪಡುವ ನೈಸರ್ಗಿಕ ಬಿಳಿ ಬಣ್ಣದ ಅಪ್ಪಟ ರೇಷ್ಮೆ ಮತ್ತು ಅಪ್ಪಟ ಚಿನ್ನದ ಎಳೆಗಳನ್ನು ಬಳಸಿ ತಯಾರಿಸಿದ ಈ ಉಡುಪನ್ನು ಗೌರವಸೂಚಕವಾಗಿ ಅವರಿಗೆ ಸಮರ್ಪಿಸಲಾಗಿತ್ತು.