ಮೈಸೂರು : ಇತ್ತೀಚಿಗೆ ಮೈಸೂರು ಭಾಗದಲ್ಲಿ ಆನ್ಲೈನ್ ಮೂಲಕ ಹಣ ವಂಚನೆ ಮಾಡುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಹಣ ವಂಚನೆಯಾದ ಎರಡು ಗಂಟೆಯೊಳಗೆ ಪೊಲೀಸರಿಗೆ ದೂರು ನೀಡಿದರೆ ಪ್ರಕರಣ ಬೇಧಿಸಬಹುದು ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಇಂದು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿಗೆ ಓಟಿಪಿ ವಂಚನೆ ಹಾಗೂ ಆನ್ ಲೈನ್ ಮೂಲಕ ಹಣ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ.
ವಂಚನೆ ನಡೆದ ಕೂಡಲೇ ಸೈಬರ್ ಕ್ರೈಮ್ ಟೋಲ್ ಫ್ರೀ ನಂಬರ್ 1930ಗೆ ಕರೆ ಮಾಡಿ, ಇಲ್ಲ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ. ನೀವು ವಂಚನೆ ನಡೆದ ಗೋಲ್ಡನ್ ಅವರ್‌ನಲ್ಲಿ ದೂರು ನೀಡಿದರೆ ಪ್ರಕರಣ ಬೇಧಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ತಡಮಾಡಿ ಎರಡು ಮೂರು ದಿನ ಬಿಟ್ಟು ದೂರು ನೀಡಿದರೆ ಪ್ರಕರಣ ಬೇಧಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಘಟನೆ ನಡೆದ 2-3 ಗಂಟೆಗಳ ಒಳಗೆ ಪೊಲೀಸರಿಗೆ ದೂರು ನೀಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಬೆಂಕಿ ಹಚ್ಚಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ
2021ರಲ್ಲಿ 49 ಸೈಬರ್ ಕ್ರೈಮ್‌ಗಳು ಮೈಸೂರು ಜಿಲ್ಲೆಯಲ್ಲಿ ದಾಖಲಾಗಿವೆ. 2022ರಲ್ಲಿ 12 ಸೈಬರ್ ಅಪರಾಧ ದೂರು ದಾಖಲಾಗಿವೆ. ಇದರಲ್ಲಿ ನಾಲ್ಕು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದರು.