ಮೈಸೂರು: ಪ್ಲಾಸ್ಮಾ ದಾನ ಮಾಡಲು ಕೊರೊನಾದಿಂದ ಗುಣಮುಖರಾದವರು ಉತ್ಸಾಹ ತೋರುತ್ತಿದ್ದರೂ ಸಹ ಬ್ಲಡ್ ಬ್ಯಾಂಕ್ನಲ್ಲಿ ಕಾರ್ಯ ಚಟುವಟಿಕೆ ಸ್ಥಗಿತಗೊಂಡಿರುವುದರಿಂದ ಪ್ಲಾಸ್ಮಾ ದಾನ ಮಾಡಲು ಮೈಸೂರಿನಿಂದ ಮಂಡ್ಯಕ್ಕೆ ಹೋಗಬೇಕಾದ ಅನಿವಾರ್ಯ ಎದುರಾಗಿದೆ.
ಕೋವಿಡ್-19ನಿಂದ ಗುಣಮುಖರಾದವರಿಂದ ಪ್ಲಾಸ್ಮಾ ದಾನ ಪಡೆಯಲು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿನ ರಕ್ತನಿಧಿ ಬ್ಯಾಂಕ್ನಲ್ಲಿ ಪ್ಲಾಸ್ಮಾ ಸ್ವೀಕಾರ ಕೇಂದ್ರವನ್ನು ತೆರೆಯಲಾಗಿತ್ತು. ಹಳೆಯ ಪ್ಲಾಸ್ಮಾ ಸರ್ವೀಸ್ ಯಂತ್ರದ ಅವಧಿ ಮುಗಿದಿದ್ದು, ಉಪಯೋಗಿಸಲು ಯೋಗ್ಯವಾಗಿಲ್ಲ. ಹೊಸ ಯಂತ್ರಕ್ಕೆ ಪರವಾನಗಿ ಪಡೆಯಬೇಕು. ಈ ಹಿನ್ನೆಲೆಯಲ್ಲಿ ಆರು ದಿನಗಳಿಂದ ಪ್ಲಾಸ್ಮಾ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.
ಕೊರೊನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಿದರೆ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವವರು ಬೇಗ ಚೇತರಿಸಿಕೊಳ್ಳುತ್ತಾರೆ. ಪ್ಲಾಸ್ಮಾ ದಾನ ಮಾಡಲು ಮುಂದಾಗುವವರಿಗೆ ರಾಜ್ಯ ಸರ್ಕಾರ 5 ಸಾವಿರ ಪ್ರೋತ್ಸಾಹಧನ ಕೂಡ ನೀಡಲಿದೆ. ಆದರೆ ಪ್ಲಾಸ್ಮಾ ದಾನ ಮಾಡಲು ಬರುವವರು ಮಂಡ್ಯ ಜಿಲ್ಲಾಸ್ಪತ್ರೆಗೆ ಹೋಗಬೇಕಿರುವುದರಿಂದ ದಾನಿಗಳು ಹಿಂದೇಟು ಹಾಕುತ್ತಿದ್ದಾರೆ.
ಈ ಸಂಬಂಧ ಈಟಿವಿ ಭಾರತದ ಜತೆ ದೂರವಾಣಿಯಲ್ಲಿ ಮಾತನಾಡಿದ ರಕ್ತನಿಧಿ ಬ್ಯಾಂಕ್ ಮುಖ್ಯಸ್ಥ ಡಾ. ಬಿ.ಎಸ್.ಮಂಜುನಾಥ್, ಆರು ದಿನಗಳಿಂದ ಪ್ಲಾಸ್ಮಾ ಸರ್ವೀಸ್ ಯಂತ್ರದ ಅವಧಿ ಮುಗಿದಿದೆ. ಹೊಸ ಯಂತ್ರ ಬಂದರೆ ಮತ್ತೆ ಹೊಸ ಲೈಸನ್ಸ್ ಸಿಗುತ್ತದೆ ಎಂದು ಹೇಳಿದ್ದಾರೆ.