ಮೈಸೂರು: ಕಾಲು ನೋವು ಚಿಕಿತ್ಸೆಗಾಗಿ ಹೋದ ಗೌರಿ ಹೆಸರಿನ ಆನೆ ಗುಣಮುಖವಾಗಿಯೂ ಕೂಡ ಇನ್ನು ವಾಪಸ್ ಬಾರದೇ ಇರುವುದರಿಂದ ಭಕ್ತರಲ್ಲಿ ಬೇಸರ ಮೂಡಿದೆ. ಸರಳವಾಗಿ ನಡೆಯುವ ಪಂಚ ಮಹಾರಥೋತ್ಸವದಲ್ಲಿ ಗೌರಿ ಪಾಲ್ಗೊಳ್ಳುತ್ತಾಳಾ ಎಂಬ ಪ್ರಶ್ನೆ ಭಕ್ತರಲ್ಲಿ ಕಾಡತೊಡಗಿದೆ.
ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದ ಪ್ರಮುಖ ಆಕರ್ಷಣೆಯಾಗಿರುವ ಗೌರಿ ಆನೆ, ಕಾಲು ನೋವಿನಿಂದ ಬಳಲುತ್ತಿದ್ದರಿಂದ ಚಿಕಿತ್ಸೆಗಾಗಿ ಮೂರು ವರ್ಷಗಳ ಹಿಂದೆ ಕೋಲಾರ ಜಿಲ್ಲೆಯ ಮಾಲೂರಿನ ಆನೆ ಆರೈಕೆ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಚಿಕಿತ್ಸೆಯ ಮೂಲಕ ಗೌರಿ ಆನೆ ಗುಣಮುಖವಾಗಿದ್ದಾಳೆ. ಆದರೆ, ನಂಜುಂಡೇಶ್ವರನ ಸೇವೆಗೆ ಲಭ್ಯವಾಗದೇ ಇರುವುದರಿಂದ ಭಕ್ತರಲ್ಲಿ ಅಸಮಾಧಾನ ತಂದಿದೆ. ಇದೇ 25 ರಂದು ನಡೆಯಲಿರುವ ಸರಳ ಪಂಚಮಹಾರಥೋತ್ಸವಕ್ಕೆ ಆನೆ ಆಗಮಿಸಿ ಸರಳ ಆಚರಣೆಗೆ ಮೆರಗು ನೀಡುತ್ತಾ ಎಂಬ ಪ್ರಶ್ನೆ ಕಾಡತೊಡಗಿದೆ.
ಈ ಸುದ್ದಿಯನ್ನೂ ಓದಿ: ಕೊರೊನಾ ಎಫೆಕ್ಟ್: ನಂಜನಗೂಡು ಪಂಚ ಮಹಾರಥೋತ್ಸವ ಜಾತ್ರೆ ರದ್ದು
ಗೌರಿ ಇದ್ದಾಗ ಪ್ರತಿ ದಿನ ಕಪಿಲಾ ನದಿಯಿಂದ ನಂಜುಂಡೇಶ್ವರನ ಅಭಿಷೇಕಕ್ಕಾಗಿ ನೀರು ತರುತ್ತಿದ್ದಳು. ಅಲ್ಲದೇ, ದೇವಾಲಯದ ಮುಂಭಾಗ ನಿಂತು ಭಕ್ತರಿಗೆ ಆಶೀರ್ವದಿಸುತ್ತಿದ್ದಳು. ದೊಡ್ಡ ಜಾತ್ರೆ ವೇಳೆ ರಸ್ತೆಯಲ್ಲಿ ಸಿಲುಕುತ್ತಿದ್ದ ರಥದ ಚಕ್ರ ಮುಂದಕ್ಕೆ ಸಾಗುವಂತೆ ಸಹಕರಿಸುತ್ತಾ ಸಕ್ರಿಯವಾಗಿ ಭಾಗವಹಿಸುತ್ತಿದ್ದಳು.