ಮೈಸೂರು: ಕೊರೊನಾ ಅಬ್ಬರ ಹಿಮ್ಮೆಟ್ಟಿಸಿ ಜನಸಾಮಾನ್ಯರ ಜೀವನವನ್ನು ಸಹಜ ಸ್ಥಿತಿಗೆ ತರಬೇಕು ಎನ್ನುವ ಕೇಂದ್ರ ಸರ್ಕಾರದ ಷರತ್ತು ಬದ್ಧ ಮಾರ್ಗಸೂಚಿಗಳಿಗೆ ಜನರು ಸ್ಪಂದಿಸುತ್ತಿದ್ದಾರೆ.
ಕೊರೊನಾ ಲಾಕ್ಡೌನ್ 4.0 ಸಡಿಲಿಕೆಯಿಂದ ಸಾರ್ವಜನಿಕರ ಸ್ಥಿತಿಗತಿ ನಿಧಾನವಾಗಿ ಹಳಿಗೆ ಮರಳುತ್ತಿದೆ. ಅಲ್ಲದೆ ಸಾರಿಗೆ ಬಸ್ಗಳ ಸಂಚಾರಕ್ಕೆ ಸೀಟ್ಗಳನ್ನು ಭರ್ತಿ ಮಾಡಿಕೊಂಡು ಸಂಚರಿಸುವಂತೆ ಸೂಚನೆ ನೀಡಿದ್ದು, ಪ್ರಯಾಣಿಕರಿಗೆ ತುಸು ನೆಮ್ಮದಿ ತಂದಿದೆ.
ಸಾರಿಗೆ ವ್ಯವಸ್ಥೆಯಲ್ಲಿ ಇಂತಿಷ್ಟೇ ಪ್ರಯಾಣಿಕರು ಕೂಳಿತುಕೊಳ್ಳಬೇಕು ಎನ್ನುವ ನಿರ್ಬಂಧ ತೆಗೆದು ಹಾಕಿದ್ದರಿಂದ ಪ್ರಯಾಣಿಕರು ಸಾರಿಗೆ ಬಸ್ಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಶೇ.40 ರಿಂದ 50 ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ನಾಲ್ಕೈದು ತಿಂಗಳಿಂದ ಬಣಗುಡುತ್ತಿದ್ದ ಗ್ರಾಮಾಂತರ ಬಸ್ ನಿಲ್ದಾಣ ಸದ್ದುಗದ್ದಲದಿಂದ ಕೂಡಿದೆ.
ನಿರ್ದಿಷ್ಟ ಪ್ರಯಾಣಿಕರು ಮಾತ್ರ ಸಂಚರಿಸಬೇಕೆಂಬ ನಿಯಮ ಸಡಿಲಿಕೆಯಾಗಿದ್ದು, ಹೆಚ್ಚು ಹೊತ್ತು ಬಸ್ ನಿಲುಗಡೆಗೆ ಅವಕಾಶವಿಲ್ಲ, ಉಳಿದಂತೆ ಆಸನಗಳ ಭರ್ತಿಗೆ ಅವಕಾಶವಿದೆ. ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸರ್ ಮಾಡುವುದನ್ನು ಸಾರಿಗೆ ಇಲಾಖೆ ಕೈ ಬಿಟ್ಟಿದೆ. ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಇಲ್ಲದ ಪ್ರಯಾಣಿಕರಿಗೆ ಅವಕಾಶ ನಿಷೇಧಿಸಿದೆ.
ಸಡಿಲಿಕೆ ಆಗುತ್ತಿದ್ದಂತೆ ಸಹಜ ಸ್ಥಿತಿಗೆ ಸಾರಿಗೆ ವ್ಯವಸ್ಥೆ ಮರಳುತ್ತಿದ್ದು, ಲಾಕ್ಡೌನ್ಗೂ ಮುಂಚೆ 2400 ಟ್ರಿಪ್ ಸಂಚರಿಸುತ್ತಿತ್ತು. ಇನ್ನೂ ಲಾಕ್ಡೌನ್ ವೇಳೆ 400 ರಿಂದ 500 ಟ್ರಿಪ್ ಸಂಚರಿಸಿದೆ. ಈಗ 1000 ಟ್ರಿಪ್ಗಳನ್ನ ಒದಗಿಸಿದ್ದೇವೆ ಎಂದು ವಿಭಾಗೀಯ ಸಂಚಾಲನಾಧಿಕಾರಿ ಹೇಮಂತ್ ಕುಮಾರ್ ಹೇಳಿದರು.