ಮೈಸೂರು: ಹುಣಸೂರು ಉಪಚುನಾವಣೆಗೆ ಕೇವಲ ಹತ್ತು ದಿನ ಮಾತ್ರ ಬಾಕಿ ಇವೆ. ಮೂರು ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿವೆ. ಹುಣಸೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ ಮತಯಾಚನೆ ಮಾಡಿದರು.
ಅನರ್ಹರು ಅಥವಾ ಅರ್ಹರು ಎಂಬುವುದರ ಬಗ್ಗೆ ಮತದಾರರು ತೀರ್ಮಾನ ಮಾಡ್ತಾರೆ. ಇದನ್ನು ಸಿದ್ದರಾಮಯ್ಯ ಅವರಿಂದ ತಿಳಿದುಕೊಳ್ಳಬೇಕಿಲ್ಲ. ಸುಪ್ರೀಂಕೋರ್ಟ್ ಯಾವ ತೀರ್ಪು ನೀಡಿದೆ ಎಂಬುವುದು ಜನರಿಗೆ ಗೊತ್ತಿದೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಶ್ರೀರಾಮುಲು ಕಿಡಿಕಾರಿದರು.
ಹುಣಸೂರು ತಾಲೂಕನ್ನು'ದೇವರಾಜ ಅರಸು ಜಿಲ್ಲೆ' ಮಾಡುವ ವಿಚಾರವಾಗಿ ನೀತಿ ಸಂಹಿತೆ ಜಾರಿ ಇರುವುದರಿಂದ ಅದರ ಬಗ್ಗೆ ಮಾತಾನಾಡುವುದಿಲ್ಲ. ರಾಜ್ಯದಲ್ಲಿ ಹಲವು ಜಿಲ್ಲೆಗಳ ಬೇಡಿಕೆ ಇದೆ. ಸಮಿತಿ ಮಾಡಿ ಮುಂದಿನ ದಿನಗಳಲ್ಲಿ ಚರ್ಚೆ ಮಾಡತ್ತೇನೆ ಎಂದು ಹೇಳಿದರು.
ಶಾಸಕ ಜಿ ಟಿ ದೇವೇಗೌಡ ಅವರನ್ನು ಭೇಟಿ ಮಾಡುತ್ತೇನೆ. ಬೆಂಬಲ ನೀಡುವುದು ಬಿಡುವುದರ ಬಗ್ಗೆ ಅವರೇ ತೀರ್ಮಾನ ಮಾಡುತ್ತಾರೆ. ನಾಳೆ ಸಿಎಂ ಬಿ ಎಸ್ ಯಡಿಯೂರಪ್ಪ ಹುಣಸೂರಿನಲ್ಲಿ ಬೃಹತ್ ಸಮಾವೇಶ ಮಾಡಲಿದ್ದಾರೆ ಎಂದು ತಿಳಿಸಿದರು.